ರಿಲ್ಯಾಕ್ಸ್ ಮೂಡ್‌ನಲ್ಲಿ ಶಾಸಕ ನಾಗೇಂದ್ರ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮೇ 6
ಚುನಾವಣೆ ಎಂದಾಕ್ಷಣ ಅಭ್ಯರ್ಥಿಗಳಿಗೆ ಸರಿಯಾದ ಊಟ, ನಿದ್ರೆ ಇರುವುದಿಲ್ಲ. ಮನೆಯ ಕಡೆಗೆ ಗಮನವೂ ಇರುವುದಿಲ್ಲ. ಮತದಾರರ ಮನೆಬಾಗಿಲಿಗೆ ಸುತ್ತಾಡಿ ಸುಸ್ತಾಗಿರುತ್ತಾರೆ. ಆದರೆ ಮತದಾನದ ನಂತರ ಹಲವು ಅಭ್ಯರ್ಥಿಗಲು ತಮ್ಮದೇ ಖಾಸಗಿ ಕೆಲಸಗಳಲ್ಲಿ, ಮನೆಯವರೊಂದಿಗೆ ಬೆರೆಯುತ್ತಾರೆ.
ಅತ್ತ ಮೇ 5ರಂದು ಮತದಾನ ಮುಗಿದಿದ್ದು ಇತ್ತ ಕೂಡ್ಲಿಗಿಯ ಹಾಲಿ ಶಾಸಕ, ಪಕ್ಷೇತರ ಅಭ್ಯರ್ಥಿ ನಾಗೇಂದ್ರ ಅವರು ಬೆಂಗಳೂರಿನ ಅವರ ಡಾಲರ್ಸ್ ಕಾಲೋನಿಯ ಮನೆಯಲ್ಲಿ ಮಕ್ಕಳೊಂದಿಗೆ ಆಡುವಾಡುತ್ತಾ, ತಮ್ಮ ಪತ್ನಿ ಮಾಡಿದ ಅಡುಗೆ ಊಟ ಮಾಡುತ್ತಾ, ಮೇ 6ರಂದು ಇಡೀ ದಿನ ಮನೆಯಲ್ಲೇ ಕುಟುಂಬದವರೊಂದಿಗೆ ಕಾಲ ಕಳೆದು ರಿಲೀಫ್ ಮೂಡಲಿದ್ದರು.
ಸತತ ಕೆಲಸ: ಬಿಜೆಪಿ ಪಕ್ಷದಿಂದ ಹೊರಬಂದು ಪಕ್ಷೇತರರಾಗಿ ನಿಲ್ಲುವ ಮನಸ್ಸು ಮಾಡಿದ್ದರಿಂದ ಹೆಚ್ಚಿನ ಕೆಲಸ ಮಾಡಬೇಕಾಗಿತ್ತು. ಅದರಲ್ಲೂ ಕಾಂಗ್ರೆಸ್, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳ ಎದುರು ಈಜುವುದು ಕಷ್ಟದ ಕೆಲಸ. ಇನ್ನು ಪಕ್ಷೇತರನಾಗಿರುವುದರಿಂದ ಅಭ್ಯರ್ಥಿಯ ಗುರುತು ಮತದಾರರಿಗೆ ತಿಳಿಪಡಿಸುವುದು ಇನ್ನೂ ಕಷ್ಟಕರದ ಕೆಲಸವಾಗಿದ್ದರಿಂದ ಒಂದು ತಿಂಗಳಕಾಲ ಸತತ ಕ್ಷೇತ್ರದ ಮತದಾರರ ಹತ್ತಿರ ಸುತ್ತಾಡಿದ್ದೇನೆ ಎನ್ನುತ್ತಾರೆ ನಾಗೇಂದ್ರ. ಜನರಿಗೆ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುತ್ತಾ, ಕ್ಷೇತ್ರದಲ್ಲಿ ಸುತ್ತಾಡಿದ್ದೇನೆ. ಇದರಿಂದಾಗಿ ಸರಿಯಾಗಿ ಒಂದು ತಿಂಗಳಿನಿಂದ ಮನೆಯಲ್ಲಿ ಊಟ ಮಾಡಿಲ್ಲ, ಸರಿಯಾಗಿ ನಿದ್ದೇನೂ ಮಾಡಿಲ್ಲ. ಏನಿದ್ದರೂ ಚುನಾವಣೆಯ ಗುಂಗಿನಲ್ಲೇ ಇದ್ದೆ ಎನ್ನುತ್ತಾರೆ.
ಅವಿಭಕ್ತ ಕುಟುಂಬ: ನಾಗೇಂದ್ರ ವಿಷ್ಣುತಾರಕ್, ರಾಣಾರತ್ನ ಇಬ್ಬರಿಗೂ ರಜೆ ಇದ್ದರೂ ಅವರನ್ನು ಒಂದು ತಿಂಗಳಿನಿಂದ ಮಾತನಾಡಿಸಲು ಅವರಿಗೆ ಆಗಿಲ್ಲವಂತೆ. ರಾತ್ರಿ ಮನೆಗೆ ಬಂದು ಬೆಳಗಿನ ಜಾವವೇ ಹೋಗುತ್ತಿದ್ದರಿಂದ ಮಕ್ಕಳನ್ನು ಮಾತನಾಡಿಸುವುದು ಆಗುತ್ತಿರಲಿಲ್ಲ.
ಪತ್ನಿ ಮಂಜುಶ್ರೀ ಕೂಡ ನಾಗೇಂದ್ರ ಅವರೊಂದಿಗೆ ಪ್ರಚಾರಕ್ಕೆ ಸಾಥ್ ನೀಡಿ, ಕೂಡ್ಲಿಗಿಯಲ್ಲಿ ರೋಡ್ ಷೋ ನಡೆಸಿದ್ದರು. ಪತಿಯ ಕಷ್ಟದಲ್ಲಿ ತಾನು ಪಾಲುದಾರಳು ಎನ್ನುವಂತೆ ಪ್ರಚಾರ ಕೈಗೊಳ್ಳುವ ಮೂಲಕ ಪತಿಗೆ ಸಾಥ್ ನೀಡಿದ್ದರು. ಈಗಲೂ ನಾಗೇಂದ್ರ ಅವರು ಅವಿಭಕ್ತ ಕುಟುಂಬದಲ್ಲೇ ವಾಸಿಸುತ್ತಿದ್ದಾರೆ. ಅಣ್ಣ ಮತ್ತು ಅವರು ಒಂದೇ ಮನೆಯಲ್ಲಿ ಜೀವನ ಸಾಗಿಸುತ್ತಿದ್ದು, ಮಕ್ಕಳು, ಸಹೋದರರೊಂದಿಗೆ ಹರಟೆ ಹೊಡೆಯುತ್ತಾ ಇಡೀದಿನ ಕಾಲ ಕಳೆದರು.
ಒಂದು ತಿಂಗಳು ದೂರ ಇದ್ದೆ: ರಿಲೀಫ್ ಮೂಡ್‌ನಲ್ಲಿದ್ದ ಶಾಸಕ ನಾಗೇಂದ್ರ ಅವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ, ಮತದಾರ ಪ್ರಭುಗಳು ತಮಗೆ ಸಾಥ್ ನೀಡಿದ್ದಾರೆ, ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಯುದ್ಧ ಮುಗಿಸಿ ಬಂದ ಅನುಭವವಾಗಿದೆ. ಸತತ ಒಂದು ತಿಂಗಳಿಂದ ಇಡೀ ಕುಟುಂಬದೊಂದಿಗೆ ಸರಿಯಾಗಿ ಮತನಾಡಿರಲಿಲ್ಲ. ಇದೀಗ ಪತ್ನಿ ಮಾಡಿದ ಅಡುಗೆಯನ್ನು ಊಟ ಮಾಡಿ, ಇಡೀ ದಿನ ಮನೆಯವರೊಂದಿಗೆ ಕಾಲ ಕಳೆಯುತ್ತಿದ್ದೇನೆ. ಒಂದು ತಿಂಗಳಿಂದ ಕುಟುಂಬದ ಕಡೆ ಗಮನ ಕೊಡುವುದಕ್ಕೆ ಆಗಿರಲಿಲ್ಲ. ಮತದಾನದ ಮುಗಿದ ನಂತರ ರಾತ್ರಿ ಮನೆಗೆ ಬಂದಿದ್ದೇನೆ, ಇಂದು ಕೊಂಚ ರಿಲೀಫ್ ಆಗಿದ್ದೇನೆ ಎಂದು ನಿಟ್ಟುಸಿರು ಬಿಡುತ್ತಾರೆ.