ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಕೊನೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮೇ 7
ಚುನಾವಣೆ ಫಲಿತಾಂಶ ಹತ್ತಿರವಾಗುತ್ತಿದ್ದಂತೆ ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಎದೆಬಡಿತ ಜೋರಾಗಲಾರಂಭಿಸಿದೆ. ಕ್ಷೇತ್ರದ ಅಭ್ಯರ್ಥಿಗಳು, ಅವರ ಆಪ್ತರು ಆತಂಕ, ದುಗುಡದಿಂದ ಕಾಯುತ್ತಿದ್ದಾರೆ.
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್, ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ವಹಾಬ್, ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ರಾಣಿ ಸಂಯುಕ್ತಾ ಅವರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಮೇಲ್ನೋಟಕ್ಕೆ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ ಎನ್ನುವಂತೆ ಕಂಡರೂ ಈ ಹಣಾಹಣಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗೆ ವಿಜಯಲಕ್ಷ್ಮೀ ಒಲಿದರೂ ಆಶ್ಚರ್ಯವಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ.
ಗೆಲುವು - ಸೋಲಿನ ಲೆಕ್ಕಾಚಾರ: ಕ್ಷೇತ್ರದಲ್ಲಿ ಎರಡು ದಿನಗಳಿಂದ ಸೋಲು-ಗೆಲುವಿನ ಲೆಕ್ಕಾಚಾರವೇ ನಡೆದಿದೆ. ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಪರ ಕೆಲವರ ಬೆಟ್ ಕಟ್ಟಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ವಹಾಬ್ ಪರ ಇನ್ನೂ ಕೆಲವರು ಬೆಟ್ ಕಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಆನಂದ್ ಸಿಂಗ್ ಎರಡನೇ ಬಾರಿ ಸ್ಪರ್ಧಿಸಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಸತ್ಯನಾರಾಯಣ ಸಿಂಗ್ ಬಿಟ್ಟರೆ ಬೇರೆ ಯಾರೂ ಎರಡನೇ ಅವಧಿಗೆ ಜಯ ಸಾಧಿಸಿಲ್ಲ. ಈ ಅಂಶ ಆನಂದಸಿಂಗ್ ಅವರಲ್ಲಿ ಆತಂಕ ಮೂಡಿಸಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಾರೆ. ಆದರೆ ಸಮಾಜಸೇವೆ ಮಾಡಿಕೊಂಡಿದ್ದಾಗಲೆ ಸಾಕಷ್ಟು ಹೆಸರು ಮಾಡಿದ್ದ ಆನಂದ್ಸಿಂಗ್ ಶಾಸಕನಾಗಿ ಮತ್ತು ಸಚಿವನಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ. ಕ್ಷೇತ್ರದ ಎಲ್ಕೆಜಿ ಓದುವ ಬಾಲಕನಿಂದ ಹಿಡಿದು ವಯೋವೃದ್ಧರ ವರೆಗೂ ಆನಂದ್ ಸಿಂಗ್ ಚಿರಪರಿಚಿತ. ಹಾಗಾಗಿ ಅವರು ಅತ್ಯಧಿಕ ಮತಗಳಿಂದ ಆಯ್ಕೆಯಾಗುತ್ತಾರೆ ಎಂಬುದು ಕೆಲವರ ಲೆಕ್ಕಾಚಾರ.
ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ವಹಾಬ್ ಈ ಕ್ಷೇತ್ರದಲ್ಲಿ ಎರಡು ಬಾರಿ ಸೋತರೂ ಈ ಬಾರಿ ಮತ್ತೆ ಕಣಕ್ಕಿಳಿದಿದ್ದಾರೆ. ಅವರು ಚುನಾವಣಾ ವೇಳೆಯಲ್ಲಿ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದ ದಿನಗಳಲ್ಲಿ ಎಲ್ಲಿರುತ್ತಾರೆ ಎಂಬುದು ತಿಳಿಯದು. ಕ್ಷೇತ್ರದಲ್ಲೂ ಅಷ್ಟಾಗಿ ಪರಿಚಿತರಲ್ಲ. ಜನರ ಕೈಗೆ ಸಿಗದವರನ್ನು ಯಾಕೆ ಗೆಲ್ಲಿಸಬೇಕು ಎನ್ನುವ ಅಭಿಪ್ರಾಯವನ್ನು ಕೆಲವು ಮತದಾರರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆನಂದಸಿಂಗ್ ವಿರುದ್ಧ ಅವರ ಗೆಲುವು ಕಷ್ಟ ಎನ್ನುವವರೂ ಇದ್ದಾರೆ. ಇನ್ನೊಂದು ಕಡೆ, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿರುವುದರಿಂದ ಅಬ್ದುಲ್ ವಹಾಬ್ ಗೆಲುವು ಸಾಧಿಸುತ್ತಾರೆ ಎಂದು ಹೇಳುವವರು ಇದ್ದಾರೆ.
ಈ ಎಲ್ಲ ಲೆಕ್ಕಾಚಾರಗಳ ಮಧ್ಯೆ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ರಾಣಿ ಸಂಯುಕ್ತ ಅವರಿಗೆ ವಿಜಯಲಕ್ಷ್ಮೀ ಒಲಿದರೂ ಆಶ್ಚರ್ಯವಿಲ್ಲ. ಆನಂದ್ಸಿಂಗ್-ಅಬ್ದುಲ್ ವಹಾಬ್ ಮಧ್ಯೆ ತುರುಸಿನ ಸ್ಪರ್ಧೆ ನಡೆದರೆ ಇದು ಸಾಧ್ಯ ಎನ್ನುತ್ತಾರೆ ಕೆಲವರು. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ರಾಣಿ ಸಂಯುಕ್ತಾ ಪರವಾಗಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು ಪ್ರಚಾರಕ್ಕೆ ಬರಲೇ ಇಲ್ಲ. ಹೀಗಾಗಿ ರಾಣಿ ಸಂಯುಕ್ತಾ ಗೆಲುವು ಸಾಧಿಸಲು ಸಾಧ್ಯವಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ.
ಈ ಎಲ್ಲ ಲೆಕ್ಕಾಚಾರ, ಕುತೂಹಲಕ್ಕೆ ಇನ್ನು ಕೆಲವೇ ಕ್ಷಣಗಳಲ್ಲಿ ತೆರೆ ಬೀಳಲಿದೆ. ಯಾರ ಲೆಕ್ಕಾಚಾರ ಏನೇ ಇರಲಿ ಮತದಾರನ ಒಟ್ಟಾರೆ ಅಭಿಮತವೇನು ಎನ್ನುವುದು ಗೊತ್ತಾಗುತ್ತದೆ. ಅಂತಿಮ ನಗು ಯಾರಾ ಪಾಲಾಗಲಿದೆ ಎಂಬುದು ತಿಳಿಯುತ್ತದೆ.
-ಸಿ.ಕೆ. ನಾಗರಾಜ್