ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇತಿಹಾಸ ನಿರ್ಮಿಸಿದ ಆನಂದಸಿಂಗ್

Lingaraj Badiger
Updated On : 9 May 2013, 12:08 pm

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮೇ 8
ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ 30,637 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಸತತವಾಗಿ ಎರಡನೇ ಬಾರಿ ಜಯಶಾಲಿಯಾದ ದಾಖಲೆ ನಿರ್ಮಿಸಿದರು.
ಬಿಜೆಪಿ ಅಭ್ಯರ್ಥಿ ಆನಂದ್‌ಸಿಂಗ್ 69,995 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ, ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ವಹಾಬ್ 39,358 ಮತಗಳನ್ನು ಪಡೆದರು. ಅಬ್ದುಲ್ ವಹಾಬ್ ಅವರಿಗಿಂತ ಆನಂದ್‌ಸಿಂಗ 30,637 ಹೆಚ್ಚು ಮತ ಪಡೆದರು. ಆನಂದ್ ಸಿಂಗ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕುಳಿತು ಆನಂದ್ ಸಿಂಗ್ ಫಲಿತಾಂಶ ವೀಕ್ಷಿಸಿದರು. ಅವರ ಗೆಲುವಿನ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು. ತಾಲೂಕು ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸಮೂಹ ಆನಂದ್ ಸಿಂಗ್ ಅವರನ್ನು ಅಭಿನಂದಿಸಿ, ಸಂತೋಷ ವ್ಯಕ್ತಪಡಿಸಿತು.
ಅನಂತರ ಆನಂದ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿ, ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ನನ್ನ ಪುನರಾಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಕ್ಷೇತ್ರದಲ್ಲಿ ಸತತವಾಗಿ ಎರಡು ಬಾರಿ ಯಾರೂ ಗೆಲುವು ಸಾಧಿಸಿಲ್ಲ ಎನ್ನುವ ಆರೋಪವನ್ನು ಕ್ಷೇತ್ರದ ಮತದಾರರು ಸುಳ್ಳಾಗಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಯಾರೇ ಮಾಡಲಿ ಅವರನ್ನು ಮತದಾರರು ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ ಎಂದು ಹೇಳಿದರು.
ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ಈ ಗೆಲುವು ನನ್ನದಲ್ಲ, ನನ್ನ ಕ್ಷೇತ್ರದ ಜನರದ್ದು. ಕ್ಷೇತ್ರದ ಮತದಾರರು ಹೆಚ್ಚಿನ ಜವಾಬ್ದಾರಿಯನ್ನು ಮತ್ತೆ ನನಗೆ ಹೊರಿಸಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವ ಮೂಲಕ ಜನರ ಋಣ ತೀರಿಸುವೆ ಎಂದು ಆನಂದಸಿಂಗ್ ಹೇಳಿದರು.
ವಿಜಯೋತ್ಸವದ ಮೆರವಣಿಗೆ: ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ವಾಲ್ಮೀಕಿ ವೃತ್ತದಲ್ಲಿ ಕೊನೆಗೊಂಡಿತು. ಅನಂತರ ಆನಂದ್ ಸಿಂಗ್ ಅಲ್ಲಿಂದ ನೇರವಾಗಿ ಹಂಪಿಗೆ ತೆರಳಿ, ವಿರೂಪಾಕ್ಷೇಶ್ವರ ಸ್ವಾಮಿ, ತಾಯಿ ಭುವನೇಶ್ವರ ದೇವಿಯ ದರ್ಶನ ಪಡೆದರು. ಬಳಿಕ ಕಮಲಾಪುರದಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಂಡರು. ಸಾವಿರಾರು ಬೆಂಬಲಿಗರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement