ಪಕ್ಷದವರು ಕೈಬಿಟ್ಟರೂ ಜನತೆಕೈ ಹಿಡಿದರು: ಅನಿಲ್ ಲಾಡ್
ಬಳ್ಳಾರಿ: ಪಕ್ಷದಲ್ಲಿದ್ದವರು ನನಗೆ ಬೆಂಬಲ ನೀಡದಿದ್ದರೂ ಜನತೆ ನನ್ನ ಮೇಲೆ ನಂಬಿಕೆ ಇರಿಸಿ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಇದು ನನ್ನ ಗೆಲುವಲ್ಲ, ಜನತೆ ಗೆಲವು ಎಂದು ಬಳ್ಳಾರಿ ನಗರ ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ಹೇಳಿದರು. ನಗರದ ರಾವ್ ಬಹುದ್ದೂರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಣಿಕೆ ಕಾರ್ಯ ಮುಕ್ತಾಯವಾಗಿ ಫಲಿತಾಂಶ ಘೋಷಣೆಯಾದ ಬಳಿಕ ಪ್ರತಿಕ್ರಿಯೆ ನೀಡಿ, 10 ವರ್ಷ ಅನ್ಯಾಯ, ಅಕ್ರಮಗಳನ್ನೆಲ್ಲ ಸಹಿಸಿಕೊಂಡ ಜನತೆ ಇಂದು ವಿಶೇಷ ತೀರ್ಪು ನೀಡಿದ್ದಾರೆ. ಈ ಚುನಾವಣೆಯಲ್ಲಿ ಆದ ಎಲ್ಲ ನಾಟಕಗಳನ್ನು ಜನತೆ ಗಮನಿಸಿದ್ದು, ನಮ್ಮ ಪಕ್ಷದವರೇ ದ್ರೋಹ ಮಾಡಿದ್ದರೂ ಮತದಾರರು ಸ್ಥಳೀಯ ಸಂಸ್ಥೆಗಳಂತೆ ಈ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದರು. ಟಿಕೆಟ್ ಹಂಚಿಕೆಯ ಆರಂಭವಾದ ಗಲಾಟೆಗಳು ಮುಗಿಯಲೇ ಇಲ್ಲ. ಆದರೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯುವಕರಿಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ನನಗೆ ಟಿಕೆಟ್ ನೀಡಿದ್ದರು. ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ ಎಂದು ಅನಿಲ್ ಲಾಡ್ ಸಂತೋಷ ಹಂಚಿಕೊಂಡರು. ನಾನು ಗೆಲ್ಲುತ್ತೇನೆಂಬ ವಿಶ್ವಾಸ ಖಚಿತವಾಗಿತ್ತು. ಜನತೆಯೂ ಆಶೀರ್ವದಿಸಿದ್ದಾರೆ. ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಅವರ ಋಣ ತೀರಿಸುವೆ. ಬಳ್ಳಾರಿ ಮಾತ್ರವಲ್ಲ, ರಾಯಚೂರು, ಕೊಪ್ಪಳ, ಗದಗ ಮುಂತಾದ ಜಿಲ್ಲೆಗಳಲ್ಲೂ ಪಕ್ಷ ಕಟ್ಟುವ ಕೆಲಸ ಮಾಡುವುದಾಗಿ ಹೇಳಿದರು.