ಲಾಡ್, ಘೋರ್ಪಡೆ ಕುಟುಂಬದ್ದೇ ಪಾರುಪತ್ಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 8
ಸಂಡೂರಿನಲ್ಲಿ ಘೋರ್ಪಡೆ ಮತ್ತು ಲಾಡ್ ಕುಟುಂಬದವರ ಕೃಪಾಕಟಾಕ್ಷ ಈ ಬಾರಿಯೂ ಕೆಲಸ ಮಾಡಿದೆ. 1959ರಿಂದ ಇಲ್ಲಿಯವರೆಗೆ ಈ ಎರಡು ಕುಟುಂಬದ ಬೆಂಬಲ ಇರುವ ಅಥವಾ ಆ ಕುಟುಂಬಕ್ಕೆ ಸೇರಿದ ಅಭ್ಯರ್ಥಿಗಳೇ ಗೆಲವು ಸಾಧಿಸುವುದು ಕ್ಷೇತ್ರದ ವಿಶೇಷ.
ಈ ಬಾರಿ ಸಂತೋಷ್ ಲಾಡ್ ಅವರ ಬೆಂಬಲಿತ ಅಭ್ಯರ್ಥಿ ಕಾಂಗ್ರೆಸ್ನ ಈ. ತುಕಾರಾಂ ಗೆಲವು ಸಾಧಿಸುವ ಕ್ಷೇತ್ರದ ಇತಿಹಾಸವನ್ನು ಮುಂದುವರಿಸಿದ್ದಾರೆ. 2008ರಲ್ಲೇ ಸಂತೋಷ್ ಲಾಡ್ ಮೂಲಕ ಗೆಲವು ಸಾಧಿಸಿದ್ದ ತುಕಾರಾಂ, ಈ ಬಾರಿ ಗೆಲ್ಲುವ ಮೂಲಕ ಎರಡನೇ ಬಾರಿ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಇಲ್ಲಿಯವರೆಗೆ 14 ಬಾರಿ ಚುನಾವಣೆಗಳು ನಡೆದಿದ್ದು, ಅದರಲ್ಲಿ 13 ಬಾರಿ ಘೋರ್ಪಡೆ ಹಾಗೂ ಲಾಡ್ ಕುಟುಂಬದವರು ಹಾಗೂ ಅವರ ಬೆಂಬಲಿತರೇ ಗೆಲವು ಸಾಧಿಸಿದ್ದಾರೆ. 1985ರಲ್ಲಿ ಸಿಪಿಐನ ಭೂಪತಿ ಘೋರ್ಪಡೆ ಅವರ ಆಂತರಿಕ ಬೆಂಬಲದಿಂದ ಗೆಲವು ಸಾಧಿಸಿದ್ದರೆ, 1978ರಲ್ಲಿ ಕಾಂಗ್ರೆಸ್ನಿಂದ ಸಿ. ರುದ್ರಪ್ಪ ಅವರು ಘೋರ್ಪಡೆ ಅವರ ಬೆಂಬಲದಿಂದಲೇ ಗೆದ್ದಿದ್ದರು. 2013ರ ಚುನಾವಣೆಯಲ್ಲಿಯೂ ಲಾಡ್ ಹಾಗೂ ಘೋರ್ಪಡೆ ಬೆಂಬಲದಿಂದಲೇ ಗೆಲವು ಸಾಧಿಸಿ, ಇತಿಹಾಸ ನಿರ್ಮಿಸಿದ್ದಾರೆ. ಕ್ಷೇತ್ರದಲ್ಲಿ ಘೋರ್ಪಡೆ ಅವರು ಏಳು ಬಾರಿ ಗೆಲವು ಸಾಧಿಸಿದ್ದರೆ, ಲಾಡ್ ಕುಟುಂಬದವರು ಎರಡು ಬಾರಿ ಗೆದ್ದಿದ್ದಾರೆ. ಉಳಿದಂತೆ ಅವರ ಬೆಂಬಲಿಗರೇ ವಿಜಯಿಯಾಗಿದ್ದಾರೆ.
ಇತಿಹಾಸ ಮುಂದುವರಿಸಿದ ಹಡಗಲಿ ಕ್ಷೇತ್ರ: ಹೂವಿನಹಡಗಲಿ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಮಾತು ಪ್ರಚಲಿತ. 2008ರಲ್ಲಿ ಬಿಜೆಪಿಯ ಚಂದ್ರನಾಯ್ಕ ಶಾಸಕರಾಗಿದ್ದಾಗ ಬಿಜೆಪಿ ಅಧಿಕಾರದಲ್ಲಿತ್ತು. 1983ರಿಂದ 2013ರವರೆಗೆ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲವು ಸಾಧಿಸುತ್ತದೋ, ಅದೇ ಪಕ್ಷದ ಸರ್ಕಾರವೇ ರಾಜ್ಯದಲ್ಲಿ ಆಡಳಿತ ನಡೆಸಿಕೊಂಡು ಬಂದಿದೆ. 30 ವರ್ಷಗಳ ಇತಿಹಾಸ ಮೆಲುಕು ಹಾಕಿದಾಗ ಕ್ಷೇತ್ರದಲ್ಲಿ ಗೆಲವು ಸಾಧಿಸಿದ ಪಕ್ಷವೇ ರಾಜ್ಯದಲ್ಲಿ ಆಳುತ್ತಾ ಬಂದಿದೆ. ಈ ಬಾರಿಯೂ ಕಾಂಗ್ರೆಸ್ನ ಪರಮೇಶ್ವರ ನಾಯ್ಕ 40, 810 ಮತಗಳ ಅಂತರದಿಂದ ಗೆಲವು ಸಾಧಿಸಿದ್ದು, ಇದೀಗ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದು ಕಾಕತಾಳಿಯ.
ಆಶ್ಚರ್ಯಕರ ಅಂತರದ ಗೆಲವು: ಬಳ್ಳಾರಿ ಜಿಲ್ಲೆ ಮಟ್ಟಿಗೆ 9 ಕ್ಷೇತ್ರದಲ್ಲಿ 7 ಕ್ಷೇತ್ರಗಳ ಅಭ್ಯರ್ಥಿಗಳು ಆಶ್ಚರ್ಯಕರ ರೀತಿಯಲ್ಲಿ 20ಕ್ಕೂ ಹೆಚ್ಚು ಸಾವಿರ ಅಂತರದ ಮತಗಳಿಂದ ಗೆಲವು ಸಾಧಿಸಿದ್ದಾರೆ. ಹೂವಿನಹಡಗಲಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪಿ.ಟಿ. ಪರಮೇಶ್ವರ ನಾಯ್ಕ 59,339 ಮತಗಳನ್ನು ಪಡೆದು, ಬಿಜೆಪಿಯ ಹಾಲಿ ಶಾಸಕ ಚಂದ್ರನಾಯ್ಕ ಅವರನ್ನು 40,810 ಮತಗಳ ಅಂತರದಿಂದ ಸೋಲಿಸಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ 69,995 ಮತ ಪಡೆದು ಕಾಂಗ್ರೆಸ್ ಅಬ್ದುಲ್ ವಹಾಬ್ ಅವರನ್ನು 30,632 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಂಪ್ಲಿ ಕ್ಷೇತ್ರದಲ್ಲಿ ಬಿಎಸ್ಸಾರ್ ಅಭ್ಯರ್ಥಿ ಟಿ.ಎಚ್. ಸುರೇಶ್ಬಾಬು ಅವರು 70,858 ಮತಗಳನ್ನು ಪಡೆದು ಪಕ್ಷೇತರ ಅಭ್ಯರ್ಥಿ ಜೆ.ಎನ್. ಗಣೇಶ್ ಅವರನ್ನು 34,396 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಸಿರುಗುಪ್ಪ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿ.ಎಂ. ನಾಗರಾಜ್ ಅವರು 65,490 ಪಡೆಯುವ ಮೂಲಕ ಬಿಜೆಪಿಯ ಸೋಮಲಿಂಗಪ್ಪ ಅವರನ್ನು 21,814 ಮತಗಳ ಅಂತರದಿಂದ ಸೋಲಿಸಿ, ಗೆಲವು ಸಾಧಿಸಿದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಎಸ್ಸಾರ್ನ ಬಿ. ಶ್ರೀರಾಮುಲು ಅವರು 74,854 ಮತ ಪಡೆದು ಕಾಂಗ್ರೆಸ್ನ ಅಸುಂಡಿ ವನ್ನೂರಪ್ಪ ಅವರನ್ನು 33,294 ಅಂತರದಲ್ಲಿ ಸೋಲಿಸಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ನ ಈ. ತುಕಾರಾಂ ಅವರು 62,246 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ನ ಧನಂಜಯ್ ಆರ್. ಅವರನ್ನು 34,631 ಮತಗಳಿಂದ ಸೋಲಿಸಿದ್ದಾರೆ. ಇನ್ನು ಕೂಡ್ಲಿಗಿ ಕ್ಷೇತ್ರದಲ್ಲಿ ಪಕ್ಷೇತರ ಬಿ. ನಾಗೇಂದ್ರ ಅವರು 71,477 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ನ ಎಸ್. ವೆಂಕಟೇಶ್ ಅವರನ್ನು 24,803 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಷ್ಟು ಮತಗಳ ಅಂತರದಿಂದ ಗೆಲವು ಸಾಧಿಸುತ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ.
-ವೈ.ಎಂ. ಸಿದ್ದಲಿಂಗಸ್ವಾಮಿ