ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸೋಲಿನ ಆತ್ಮಾವಲೋಕನ

Vishwanath S
Updated On : 10 May 2013, 12:00 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 9
ಬಳ್ಳಾರಿ ಜಿಲ್ಲೆಯ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಸೋತ ಅಭ್ಯರ್ಥಿಗಳು, ಪಕ್ಷದ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಸೋಲಿಗೆ ಯಾವ ಯಾವ ಅಂಶಗಳು ಕಾರಣವಾಯಿತು ಎನ್ನುವ ಚಿಂತನೆಯಲ್ಲಿ ತೊಡಗಿದ್ದಾರೆ. ಆಪ್ತರೊಂದಿಗೆ ಸಮಾಲೋಚಿಸುತ್ತಿದ್ದಾರೆ. ಇನ್ನು ಕೆಲವು ಅಭ್ಯರ್ಥಿಗಳು ಸೋಲಿನ ಗುಂಗಿನಿಂದ ಹೊರಬಂದಿಲ್ಲ.
ಜಿಲ್ಲೆಯಲ್ಲಿ ಸಿರುಗುಪ್ಪ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ನಗರ, ಹೂವಿನಹಡಗಲಿ ಕ್ಷೇತ್ರಗಳ ಫಲಿತಾಂಶ ಕುತೂಹಲದಿಂದ ಕೂಡಿತ್ತು. ಬಳ್ಳಾರಿ ಗ್ರಾಮೀಣ, ಸಂಡೂರು, ಕೂಡ್ಲಿಗಿ, ವಿಜಯನಗರ ಕ್ಷೇತ್ರಗಳಲ್ಲಿ ಫಲಿತಾಂಶ ನಿರೀಕ್ಷಿತವಾಗಿತ್ತು. ಬಿಎಸ್‌ಆರ್ ಮುಖಂಡರಿಗೆ ಎರಡು ಸ್ಥಾನಗಳಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಅವರ ನಿರೀಕ್ಷೆಯಂತೆ ಆಗಿದೆ. ಆದರೆ ಬಿಜೆಪಿ ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ನಂಬಿಕೆ ಹೊಂದಿತ್ತು. ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. ಬಿಜೆಪಿ ಮುಖಂಡರು ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
125 ಮತಗಳಿಂದ ಸೋತ ನೇಮಿರಾಜ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 125 ಮತಗಳ ಅಂತರದಿಂದ ಸೋತಿರುವ ಬಿಜೆಪಿಯ ನೇಮಿರಾಜ ನಾಯ್ಕ್, ತಮ್ಮ ಸೋಲಿಗೆ ಕಾರಣ ಏನೆಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಮತಗಳನ್ನು ಪಡೆಯುವಾಗ ಎಡವಿದ್ದೆಲ್ಲಿ ಎನ್ನುವ ಆಲೋಚನೆ ಮಾಡುತ್ತಿದ್ದಾರೆ. ತೀರಾ ಕಡಿಮೆ ಅಂತರದಿಂದ ಸೋತಿರುವುದು ಅವರಿಗೆ ಆಘಾತವನ್ನು ಉಂಟುಮಾಡಿದೆ. ಪಕ್ಷಾಂತರ ಮಾಡಿಕೊಂಡು ಕೊನೆಯ ಹಂತದಲ್ಲಿ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದ ಭೀಮನಾಯ್ಕ್ ಗೆಲವು ಸಾಧಿಸಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಆರಂಭದಲ್ಲಿ ನೇಮಿರಾಜ ನಾಯ್ಕ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಕೊನೆಯ ಎರಡು ದಿನಗಳಲ್ಲಿ ಬದಲಾವಣೆ ಆಗಲು ಕಾರಣವೇನು ಎಂಬ ಅಂಶದ ಕುರಿತು ಅವರು ಚಿಂತೆ ಮಾಡುತ್ತಿದ್ದಾರೆ.
ಸೋಲಿನ ಬಗ್ಗೆ ಬಿಜೆಪಿ ಆತ್ಮಾವಲೋಕನ: ಸಿರುಗುಪ್ಪ, ವಿಜಯನಗರ, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎನ್ನುವ ಲೆಕ್ಕಾಚಾರ ಬಿಜೆಪಿಯದ್ದಾಗಿತ್ತು. ಆದರೆ ಸಿರುಗುಪ್ಪದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಲಿಂಗಪ್ಪ ಭಾರಿ ಅಂತರದಿಂದ ಸೋಲು ಕಂಡಿದ್ದಾರೆ. ನೇಮಿರಾಜ ನಾಯ್ಕ್ ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ. ಇದು ಜಿಲ್ಲೆಯ ಬಿಜೆಪಿ ಮುಖಂಡರ ಚರ್ಚೆಯ ವಿಷಯವಾಗಿದೆ. ಹಡಗಲಿಯ ಚಂದ್ರನಾಯ್ಕ್ ಗೆಲುವಿನ ಬಗ್ಗೆ ಬಿಜೆಪಿಗೆ ಅಷ್ಟಾಗಿ ಭರವಸೆ ಇರಲಿಲ್ಲ.
ನಿರೀಕ್ಷೆ ಮೀರಿ ಕಾಂಗ್ರೆಸ್ ಗೆಲುವು: ಕೇವಲ 2-3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಕಾಂಗ್ರೆಸಿಗರು ಲೆಕ್ಕಾಚಾರ ಹಾಕಿದ್ದರು. ಬಳ್ಳಾರಿ ನಗರ, ಸಂಡೂರಿನಲ್ಲಿ ಗೆಲುವು ಖಚಿತ ಎಂಬ ವಿಶ್ವಾಸ ಅವರದ್ದಾಗಿತ್ತು. ಆದರೆ ಹೂವಿನ ಹಡಗಲಿ, ಸಿರುಗುಪ್ಪದಲ್ಲಿ ಪೈಪೋಟಿ ಇದ್ದುದ್ದರಿಂದ ಗೆಲುವು ಅನುಮಾನವಾಗಿತ್ತು. ಕಾಂಗ್ರೆಸ್ ನಿರೀಕ್ಷೆಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದರಿಂದ ಚಿಂತೆಗೆ ಕಾರಣವಿಲ್ಲ. ಆದರೂ ಉಳಿದ ಐದು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದೇವೆಯೇ? ಇನ್ನೂ ಹೆಚ್ಚಿನ ಪ್ರಚಾರ ನಡೆಸಿದರೆ ಅವಕಾಶವಿತ್ತೇ ಎಂಬ ಚಿಂತನೆ ಮಾಡುತ್ತಿದ್ದಾರೆ. ಟಿಕೆಟ್ ಘೋಷಣೆ ಪೂರ್ವದಲ್ಲಿ 6-7 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಸಾಧ್ಯತೆ ಕಂಡುಬಂದಿತ್ತು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಸಾಧ್ಯತೆ ಕಡಿಮೆಯಾಗುತ್ತ ಹೋಯಿತು. ಈ ಕುರಿತು ಕಾಂಗ್ರೆಸ್ ಚಿಂತನೆ ಮಾಡುವಂತಾಗಿದೆ.
ಪಕ್ಷದ ಸಂಘಟನೆಯತ್ತ ಬಿಎಸ್‌ಆರ್ ಚಿತ್ತ: ಬಿಎಸ್‌ಆರ್ ಪಕ್ಷ ನಿರೀಕ್ಷೆಯಂತೆ ಬಳ್ಳಾರಿ ಗ್ರಾಮೀಣ ಹಾಗೂ ಕಂಪ್ಲಿಯಲ್ಲಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಒಳಜಗಳದಿಂದಾಗಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಗಿದೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಎಸ್‌ಆರ್ ಸೋಲು ಸಹಜವಾಗಿಯೇ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ ಬಿಎಸ್‌ಆರ್ ನಾಯಕರಿಗೆ ಪ್ರಾಬಲ್ಯ ಸಾಧಿಸುವ ನಂಬಿಕೆ ಇರಲಿಲ್ಲ. ಆದರೂ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಯಾವ ರೀತಿ ಸಂಘಟಿಸಬೇಕು, ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಲು ಯಾವ ಯೋಜನೆ ರೂಪಿಸಬೇಕು ಎನ್ನುವ ಕುರಿತು ಚಿಂತನೆ ಮಾಡುತ್ತಿದ್ದಾರೆ.
ಹೂವಿನಹಡಗಲಿಯಲ್ಲಿ ಕೆಜೆಪಿ ಗೆಲ್ಲುವ ಭರವಸೆ ಹೊಂದಿತ್ತು. ಆದರೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಸೋಲಿನ ಕಾರಣ ಹುಡುಕುತ್ತಿದೆ. ಜೆಡಿಎಸ್ ಮುಖಂಡರು ಹಗರಿಬೊಮ್ಮನಹಳ್ಳಿಯಲ್ಲಿ ಖಾತೆ ತೆರೆದ ಸಂತಸದಲ್ಲಿದ್ದಾರೆ.

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement