ಅಂಗನವಾಡಿ ಆಹಾರ ಕಳ್ಳಸಾಗಾಟ ಪತ್ತೆ
ಕೂಡ್ಲಿಗಿ: ಮಕ್ಕಳಿಗೆ ಬಂದಿದ್ದ ಆಹಾರವನ್ನು ಕಾಳಸಂತೆಗೆ ಸಾಗಿಸುವ ಅಂಗನವಾಡಿ ಕಾರ್ಯಕರ್ತೆಯ ಯತ್ನಕ್ಕೆ ತಡೆಯೊಡ್ಡಿದ ಗ್ರಾಮಸ್ಥರು ಆಹಾರವನ್ನು ಮತ್ತೆ ಅಂಗನವಾಡಿಗೆ ತರುವಲ್ಲಿ ಯಶಸ್ವಿಯಾದ ಘಟನೆ ಕುರಿಹಟ್ಟಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೇ 4ರಂದು ಬೆಳಗ್ಗೆ 9.35ರ ಸುಮಾರಿಗೆ 3 ಚೀಲ ಆಹಾರ ಧಾನ್ಯಗಳನ್ನು ಆಟೋದಲ್ಲಿ ಸಾಗಿಸುತ್ತಿದ್ದಾಗ ಗ್ರಾಮಸ್ಥರು ತಡೆದಿದ್ದಾರೆ. ಕೂಡ್ಲಿಗಿ ಸಿಡಿಪಿಓಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ಚುನಾವಣೆ ಇದ್ದ ಕಾರಣ, ಆಹಾರವನ್ನು ಶಾಲೆಯಲ್ಲಿಟ್ಟು, ಬೀಗ ಹಾಕಿ. ಆಮೇಲೆ ಬಂದು ಪರಿಶೀಲಿಸುತ್ತೇನೆ ಎಂದು ಸಿಡಿಪಿಓ ತಿಳಿಸಿದ್ದಾರೆ. ಗ್ರಾಮಸ್ಥರು ಆಹಾರದ ಚೀಲಗಳನ್ನು ಅಂಗನವಾಡಿ ಕೇಂದ್ರಕ್ಕೆ ವಾಪಸ್ ತಂದು ಇಟ್ಟಿದ್ದಾರೆ ಎಂದು ಕುರಿಹಟ್ಟಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಎಚ್. ನಾಗಣ್ಣ, ಯುವ ಮುಖಂಡ ಜಿ. ಓಬಯ್ಯ ಶುಕ್ರವಾರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಅಲ್ಲದೆ, ಕುರಿಹಟ್ಟಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ ಸುರಕ್ಷಾ, ಜನನ, ಮರಣ ಪ್ರಮಾಣಪತ್ರಗಳು, ಭಾಗ್ಯಲಕ್ಷ್ಮಿ ಬಾಂಡ್ಗಳಿಗೂ ಫಲಾನುಭವಿಗಳಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಬಂದು ಹೋಗಿದ್ದರೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿಲ್ಲ. ಮತ್ತೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಎಚ್. ನಾಗಣ್ಣ, ಜಿ. ಓಬಯ್ಯ ಅವರು ಒತ್ತಾಯಿಸಿದ್ದಾರೆ.