ಕಡ್ಡಾಯ ತೇರ್ಗಡೆ ನೀತಿ ಕೈಬಿಡಿ: ಪ್ರತಿಭಟನೆ
ಬಳ್ಳಾರಿ: ಶಿಕ್ಷಣ ಹಕ್ಕು ಕಾಯ್ದೆ 2009ರಡಿ ಬರುವ 8ನೇ ತರಗತಿ ವರೆಗೆ ಕಡ್ಡಾಯ ತೇರ್ಗಡೆ ನೀತಿ ಕೈಬಿಡಬೇಕೆಂದು ಆಗ್ರಹಿಸಿ ಎಐಡಿಎಸ್‌ಓ ಜಿಲ್ಲಾ ಸಮಿತಿ ಸದಸ್ಯರು, ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶಿಕ್ಷಣ ಹಕ್ಕು ಕಾಯ್ದೆ 2009ರಡಿ ಬರುವ 8ನೇ ತರಗತಿ ವರೆಗೆ ಕಡ್ಡಾಯ ತೇರ್ಗಡೆ ನೀತಿ, ಸರ್ವ ಶಿಕ್ಷಣ ಅಭಿಯಾನ ಉತ್ತೇಜಿಸುತ್ತಿರುವ ಬೋಧನೆ ಮತ್ತು ಕಲಿಕಾ ಪದ್ಧತಿಗಳು ಪ್ರಾಥಮಿಕ ಶಿಕ್ಷಣ ಪದ್ಧತಿಗೆ ಮಾರಕವಾಗಿವಾಗಿವೆ ಎಂದು ಎಐಡಿಎಸ್‌ಓ ಸದಸ್ಯರು ದೂರಿದರು.
ವಿದ್ಯಾರ್ಥಿಗೆ ತಾನು ಮುಂದಿನ ತರಗತಿಗೆ ಹೋಗುವುದು ಖಚಿತವೆಂದು ತಿಳಿದಾಗ, ಶ್ರಮಪಟ್ಟು ಕಲಿಯಬೇಕೆಂಬ ಉತ್ತೇಜನವಿರಲ್ಲ ಎಂಬುದು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯ. 8ನೇ ತರಗತಿ ವರೆಗೆ ಕಡ್ಡಾಯ ತೇರ್ಗಡೆ ನೀತಿ ಕುರಿತು ಸರ್ಕಾರ ಮರುಚಿಂತನೆ ಮಾಡುವಂತೆ ಏ. 25ರಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸನ್ನು ಪರಿಗಣಿಸಿ ಹೊಸ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸಬೇಕು ಅಥವಾ ಶಿಕ್ಷಣ ಹಕ್ಕು ಕಾಯ್ದೆ 2009 ತಿದ್ದುಪಡಿ ತರಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಅಶ್ಲೀಲತೆ ಪ್ರಚಾರ ಮಾಡುವ ಅಂತರ್ಜಾಲ ತಾಣಗಳನ್ನು ನಿಷೇಧಿಸಬೇಕು. ಜಾಹೀರಾತು, ಟಿವಿ ಚಾನೆಲ್‌ಗಳು, ಪತ್ರಿಕೆಗಳ ಮೂಲಕ ಅಶ್ಲೀಲತೆ ಪ್ರಚಾರಕ್ಕೆ ಕಡಿವಾಣ ಹಾಕಬೇಕು. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ, ಜೂಡೋಗಳಂಥ ಆತ್ಮರಕ್ಷಣೆ ಕೌಶಲ್ಯಗಳನ್ನು ಕಡ್ಡಾಯವಾಗಿ ಕಲಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಚುಡಾಯಿಸುವಿಕೆ ನಿಲ್ಲಿಸಲು ಶಿಕ್ಷಕರು-ಪೋಷಕರು-ವಿದ್ಯಾರ್ಥಿಗಳು ಸ್ಥಳೀಯ ನಾಗರಿಕರನ್ನು ಒಳಗೊಂಡ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗ ಮನವಿ ನೀಡಲಾಯಿತು. ಪ್ರತಿಭಟನೆಯಲ್ಲಿ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಡಾ. ಪ್ರಮೋದ್, ಜಿಲ್ಲಾಧ್ಯಕ್ಷ ಎಸ್. ಉಮೇಶ್, ಕಾರ್ಯದರ್ಶಿ ಗೋವಿಂದ, ಮುಖಂಡರಾದ ಸತೀಶ್, ಸುಮಿತ್ರಾ ಪಾಲ್ಗೊಂಡಿದ್ದರು.