ನೂತನ ಶಾಸಕರಿಗೆ ಸಮಸ್ಯೆಗಳ ಸ್ವಾಗತ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 10
ಹೂವಿನಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ನೂತನ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್‌ರನ್ನು ಕ್ಷೇತ್ರಾದ್ಯಂತ ಕುಡಿವ ನೀರು, ವಿದ್ಯುತ್ ತೊಂದರೆ, ರಸ್ತೆ, ಮೂಲ ಸೌಕರ್ಯಗಳು, ಮೂಲೆಗುಂಪಾದ ಹಳ್ಳಿಗಳು, ರಸ್ತೆ ಅಗಲೀಕರಣ, ಪಡಿತರ ಚೀಟಿ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಸೇರಿದಂತೆ ಸಾಲು ಸಾಲು ನೂರಾರು ಸಮಸ್ಯೆಗಳ ಸರಮಾಲೆಗಳೇ ಸ್ವಾಗತಿಸುತ್ತಿವೆ.
ತುಂಗಭದ್ರೆ ತಟದಲ್ಲಿದ್ದರೂ ಈವರೆಗೂ ಕುಡಿಯುವ ನೀರಿಗೆ ತತ್ವಾರ ಮಾತ್ರ ತಪ್ಪಿಲ್ಲ. ಈಗಾಗಲೇ ಪಂಚಾಯತ್‌ರಾಜ್ ಇಲಾಖೆ 78 ಹಳ್ಳಿಗಳನ್ನು ಫ್ಲೋರೈಡ್ ಮುಕ್ತ ಗ್ರಾಮಗಳನ್ನಾಗಿ ಪರಿವರ್ತಿಸಲು ಸಂಯುಕ್ತ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಪೂರೈಕೆ ಯೋಜನೆ ಇನ್ನು ಸಮರ್ಪಕವಾಗಿ ಕಾರ್ಯರೂಪಗೊಂಡಿಲ್ಲ. ನದಿ ಪೂರ್ಣ ಬತ್ತಿ ಹೋಗಿದ್ದು, ಹತ್ತು ಹಲವು ಕಾರಣಗಳಿಂದ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಹಳ್ಳಿಗರಿಗೆ ಕೊಳವೆ ಬಾವಿಯ ಫ್ಲೋರೈಡ್‌ಯುಕ್ತ ನೀರೇ ಗತಿ.
ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. 15-20 ದಿನಕ್ಕೊಮ್ಮೆ ಇಲ್ಲಿನ ಜನತೆ ನೀರು ಕಾಣಬೇಕಾಗಿದೆ. ಇದರಿಂದ ಈಗಾಗಲೇ ಪಟ್ಟಣದ ಜನತೆ ರೋಸಿ ಹೋಗಿದ್ದಾರೆ. ಇನ್ನು ಗ್ರಾಮೀಣ ಭಾಗದ ಜನತೆಯ ಸ್ಥಿತಿಯಂತೂ ದೇವರಿಗೇ ಪ್ರೀತಿ. ವಿದ್ಯುತ್ ಸಮಸ್ಯೆಯಿಂದ 4-6 ದಿನಗಳಿಗೊಮ್ಮೆ ನೀರು ಕಾಣುವಂತಾಗಿದೆ. ವಾರಗಟ್ಟಲೆ ವಿದ್ಯುತ್ ಕೈ ಕೊಟ್ಟರೆ ಫ್ಲೋರೈಡ್‌ಯುಕ್ತ ಕೊಳವೆ ಬಾವಿ ನೀರೇ ಆ ಜನತೆಗೆ ಗತಿ.
ರೈತರಿಗೆ ವಿದ್ಯುತ್ ಸಮಸ್ಯೆ: ವಿದ್ಯುತ್ ಸಮಸ್ಯೆಯಿಂದ ರೈತರಿಗೆ ಮೋಟಾರ್ ಚಾಲೂ ಮಾಡಲು ನಿದ್ದೆಗೆಟ್ಟು ಹಗಲು ರಾತ್ರಿ ಮೋಟಾರ್ ಇರುವ ಸ್ಥಳದಲ್ಲೇ ಜಾಗರಣೆ ಮಾಡುತ್ತಿದ್ದಾರೆ. ಕಾಳು ಕಟ್ಟುವ ಮೊದಲೇ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಬಿತ್ತನೆ ಮಾಡಿದ್ದ ಶೇಂಗಾ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗಿದೆ. ಇನ್ನು ನದಿ ತೀರದ ಹಳ್ಳಿಗಳಲ್ಲಿ ನಾಟಿ ಮಾಡಿರುವ ಬತ್ತಕ್ಕೆ ನೀರಿಲ್ಲದೇ ಒಣಗಿ ನಿಂತಿದ್ದು, ನದಿ ಬತ್ತಿ ಹೋಗಿರುವುದು ಮತ್ತು ಪದೆ ಪದೇ ವಿದ್ಯುತ್ ಕೈ ಕೊಡುತ್ತಿರುವುದರಿಂದ ರೈತರು ರೋಸಿ ಹೋಗಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣ, ಹಳ್ಳಿಗಳಿಗೆ ಸಂಪರ್ಕ ಸೇತುವೆಯಾಗಿದ್ದ ರಸ್ತೆ ಸ್ಥಿತಿಯಂತೂ ಹೇಳ ತೀರದು. ತಗ್ಗು ಗುಂಡಿಗಳಿಂದ ಕಿತ್ತು ಹೋಗಿರುವ ಹಾಳು ರಸ್ತೆಗಳಲ್ಲೇ ಜನರು ನಿತ್ಯ ಸಂಚಾರ ಮಾಡಬೇಕಿದೆ. ಮಾಗಳ-ಹೊಳಲು, ಅಯ್ಯನಹಳ್ಳಿ-ಮಾಗಳ, ಅಲ್ಲಿಪುರ-ಮಾಗಳ, ಗಿರಿಯಾಪುರ-ಬನ್ನಿಮಟ್ಟಿ, ಮಕರಬ್ಬಿ-ಬ್ಯಾಲಹುಣ್ಸಿ, ಹಿರೇಹಡಗಲಿ-ಹಿರೇಕೊಳಚಿ, ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ನದಿ ತೀರದ ಗ್ರಾಮಗಳಲ್ಲಿ ರಸ್ತೆಗಳನ್ನು ಇದುವರೆಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಿರುಗಿ ನೋಡಿಲ್ಲ.
ಗ್ರಾಮಕ್ಕೆ ಬಸ್ಸೇ ಇಲ್ಲ: ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷಗಳು ಕಳೆದರೂ ಇನ್ನು ಬಸ್ ಕಾಣದ ಗ್ರಾಮಗಳಿವೆ, ಇಲ್ಲಿನ ಎಲ್ಲ ಗ್ರಾಮಗಳೂ ನೀರು, ರಸ್ತೆ, ಚರಂಡಿ, ವಿದ್ಯುತ್ ಬೀದಿದೀಪ, ಸಾರಿಗೆ ಸಂಪರ್ಕ, ಸಾರ್ವಜನಿಕ ಶೌಚ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಮೂಲೆಗುಂಪಾಗಿವೆ. ವ್ಯಾಸಮಲ್ಲಾಪುರ, ದಾಸನಹಳ್ಳಿ, ನಡುವಿನಹಳ್ಳಿ, ಕಳಸಾಪುರ ಗ್ರಾಮಗಳಿಗೆ ಇಂದಿಗೂ ಬಸ್ಸಿನ ಸೌಕರ್ಯ ಇಲ್ಲದೇ ಸಂಚಾರಕ್ಕೆ ಖಾಸಗಿ ವಾಹನಗಳನ್ನು ಆಶ್ರಯಿಸಿದ್ದಾರೆ.
ಈಗ್ಗೆ 3 ವರ್ಷಗಳ ಹಿಂದೆ ಪಟ್ಟಣದ ಅಭಿವೃದ್ಧಿ, ರಸ್ತೆ ಅಗಲೀಕರಣ ಮಾಡಬೇಕೆಂದು ನಿರ್ಧರಿಸಿದಂತೆ ಕೆಲವು ಕಡೆಗಳ ಅಗಲೀಕರಣ ಮಾಡಲಾಗಿದೆ. ಆದರೆ ಈ ವರೆಗೂ ಪೂರ್ಣಗೊಂಡಿಲ್ಲ, ಎಲ್ಲ ಕಡೆಗೂ ಕಾಮಗಾರಿಗಳು ಅರೆಬೆರೆಯಾಗಿ ನಿಂತಿವೆ. ಕಟ್ಟಡಗಳನ್ನು ಕಿತ್ತು ಹಾಕಲಾಗಿದೆ, ಆದರೆ ಅಭಿವೃದ್ಧಿ ಮಾತ್ರ ಇನ್ನು ಕಂಡಿಲ್ಲ. ಪಟ್ಟಣದ ಹೃದಯ ಭಾಗದಲ್ಲಿ ರಸ್ತೆ, ಚರಂಡಿ ಕಾಮಗಾರಿ ಆಗಿದ್ದು, ಬಿಟ್ಟರೆ ಉಳಿದ ಕಾಮಗಾರಿಗಳಿಗೆ ಅನುದಾನದ ಕೊರತೆ ಕಾಡುತ್ತಿದೆ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಕಟ್ಟಡ ನಿರ್ಮಾಣ ಭಾಗ್ಯ ಇನ್ನು ಕೂಡಿ ಬಂದಿಲ್ಲ. ನಿವೇಶನಕ್ಕಾಗಿ ಹುಡುಕಾಟ ಶುರುವಾಗಿದೆ, ಸರ್ವೇ ಕಾರ್ಯ ಮುಗಿದಿದೆ ಎಂಬ ವರದಿ ಇದ್ದರೂ ಕಟ್ಟಡ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಸಮರ್ಪಕ ಕಟ್ಟಡವಿಲ್ಲದೇ ವಿಧಿಯಿಲ್ಲದೆ ಅದೇ ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ನಡೆಯುತ್ತಿದೆ.
ಇಂತಹ ಹತ್ತು ಹಲವು ಸಮಸ್ಯೆಗಳ ಸರಮಾಲೆಯನ್ನೇ ಕ್ಷೇತ್ರ ಸುತ್ತಿಕೂಂಡಿದೆ. ನೂತನ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಇವುಗಳನ್ನು ಭೇದಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾರೋ ಕಾದುನೋಡಬೇಕು.
-ಚಂದ್ರು ಕೊಂಚಿಗೇರಿ