ಬೇಡಿಕೆ ಈಡೇರಿಸಿ: ಔಷಧಿ ವ್ಯಾಪಾರಿಗಳ ಪ್ರತಿಭಟನೆ
ಬಳ್ಳಾರಿ: ಔಷಧಿ ವ್ಯಾಪಾರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ ವಿರೋಧಿಸಿ, ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಬಳ್ಳಾರಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಬಿ.ಕೆ. ಪ್ರಸನ್ನಕುಮಾರ್, ಕಾರ್ಯದರ್ಶಿ ವಿ.ಎಂ. ಶೈಲೇಂದ್ರ ನೇತೃತ್ವದಲ್ಲಿ ನೂರಾರು ಔಷಧಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘಟನೆ ಕರೆ ಕೊಟ್ಟಿದ್ದ ಒಂದು ದಿನದ ಸಾಂಕೇತಿಕ ವ್ಯಾಪಾರ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಔಷಧ ವ್ಯಾಪಾರಿ ಅಂಗಡಿಗಳು ಮುಚ್ಚಿದ್ದವು.
ಕಾರ್ಯದರ್ಶಿ ವಿ.ಎಂ ಶೈಲೇಂದ್ರ ಮಾತನಾಡಿ, 20 ವರ್ಷಗಳ ಹಿಂದೆ ನಿಗದಿಪಡಿಸಿರುವ ಔಷಧ ವ್ಯಾಪಾರಸ್ಥರ ಲಾಭಾಂಶ ಕಡಿತಗೊಳಿಸುವ ಕುರಿತು ಕಾಯ್ದೆಗೆ 2013ರ ತಿದ್ದುಪಡಿಗೆ ಸೂಚಿಸಲಾಗಿರುವ ಲಾಭಾಂಶ ಕಡಿತಗೊಳಿಸದೆ ಈಗಿನ ಪ್ರಕಾರವೇ ಮುಂದುವರಿಸಬೇಕು. ಔಷಧ ವ್ಯಾಪಾರದಲ್ಲಿ ತೊಡಗಬೇಕಾಗಿದ್ದ ಫಾರ್ಮಾಸಿಸ್ಟ್ ಔಷಧ ತಜ್ಞರ ಕೊರತೆ ನೀಗಿಸಲು ವ್ಯಾಪಾರ ನಡೆಸುತ್ತಿರುವ ಪಾಲುದಾರರ, ಮಾಲೀಕನಿಗೆ ಔಷಧ ಹಾಗೂ ಕಾಂತಿವರ್ಧಕ ಔಷಧಿ ಮಾರಾಟಕ್ಕೆ ಅರ್ಹತೆ, ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.
ಔಷಧ ಹಾಗು ಕಾಂತಿವರ್ಧಕ ಕಾಯ್ದೆ 1940ರ ಕಲಂ ಉಲ್ಲಂಘನೆಗೆ ಔಷಧ ಮಾರಾಟಗಾರನು ತಾನು ಖರೀದಿ, ದಾಸ್ತಾನು ಮಾಡಿದ ದಾಖಲೆ ಹೊಂದಿರುವುದನ್ನು ಪರಿಶೀಲಿಸಿ ಆತನನ್ನು ಆರೋಪಿಯನ್ನಾಗಿ ಮಾಡುವ ಬದಲು, ಆತನು ತಪ್ಪಿತಸ್ಥ ಎಂಬುದು ಪುರಾವೆ ಆಗುವವರೆಗೆ ಶಿಕ್ಷಾರ್ಹ ಕಲಂಗಳ ಜಾರಿ ಹಿಂಪಡೆಯಬೇಕು. ಔಷಧ ವಿತರಣೆಯಲ್ಲಿ ದೇಶದ 25 ಲಕ್ಷ ಕುಟುಂಬಗಳು ತೊಡಗಿದ್ದರಿಂದ ಔಷಧಿಯ ವಹಿವಾಟನ್ನು ವಿದೇಶಿ ಹಣದ ಹೂಡಿಕೆಯಿಂದ ಮುಕ್ತಗೊಳಿಸಬೇಕೆಂದು ಮನವಿ ನೀಡಿ ಆಗ್ರಹಿಸಿದ್ದಾರೆ.