ಸಿದ್ದು ಆಯ್ಕೆ ಅಹಿಂದಗೆ ಸಂದ ಗೌರವ: ಸಂತಸ
ಹಗರಿಬೊಮ್ಮನಹಳ್ಳಿ: ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಬಹುಕಾಲದ ನಂತರ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಅಹಿಂದ ವರ್ಗಕ್ಕೆ ಉನ್ನತ ಸ್ಥಾನ ನೀಡಿದ್ದು, ಇದು ಅಹಿಂದ ವರ್ಗಕ್ಕೆ ಸಂದ ಗೌರವ ಎಂದು ಅಹಿಂದ ರಾಜ್ಯ ಹಿರಿಯ ಮುಖಂಡ ತಂಬ್ರಹಳ್ಳಿ ಪ್ರಭಾಕರ ಹೇಳಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಸಲ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಗುವುದರ ಹಿಂದೆ ಸಿದ್ದರಾಮಯ್ಯ ಅವರ ಶಕ್ತಿಯೇ ಪ್ರಮುಖ ಕಾರಣ. ಸಿದ್ದರಾಮಯ್ಯ ಅವರ ಶ್ರಮವನ್ನು ಗುರುತಿಸುವ ಮೂಲಕ ಕಾಂಗ್ರೆಸ್ ಸರಿಯಾದ ನಿರ್ಧಾರವನ್ನು ಸರಿಯಾದ ಸಮಯದಲ್ಲೇ ತೆಗೆದುಕೊಂಡಿದೆ ಎಂದು ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿದರು.
ಕಳೆದ ನಾಲ್ಕು ದಶಕಗಳಿಂದಲೂ ರಾಜ್ಯ ರಾಜಕಾರಣದಲ್ಲಿರುವ ಸಿದ್ದರಾಮಯ್ಯ, ಸ್ವಚ್ಛ, ದಕ್ಷ ಆಡಳಿತಗಾರರೆಂದೇ ಹೆಸರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರಾಜ್ಯದ ಖಜಾನೆಯನ್ನು ಸಂಪೂರ್ಣ ಲೂಟಿ ಮಾಡಲಾಗಿದೆ. ಅರ್ಥಿಕ ಸಚಿವರಾಗಿ 6 ಸಲ ಬಜೆಟ್ ಮಂಡಿಸಿರುವ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರಿಂದ ಮಾತ್ರ ಹದಗೆಟ್ಟಿರುವ ಹಣಕಾಸಿನ ಪರಿಸ್ಥಿತಿಯನ್ನು ಸರಿಪಡಿಸಿ ಮತ್ತೆ ರಾಜ್ಯದ ಖಜಾನೆಯನ್ನು ಭರ್ತಿ ಮಾಡಲು ಸಾಧ್ಯ. ಕರ್ನಾಟಕದ ಹದಗೆಟ್ಟ ಅರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಸಿದ್ದರಾಮಯ್ಯ ಅವರ ಆಯ್ಕೆ ಸಮಯೋಚಿತ ನಿರ್ಧಾರ ಎಂದರು.
ಅಹಿಂದ ಮುಖಂಡರಾದ ಉಲುವತ್ತಿ ಸೋಮಲಿಂಗಪ್ಪ, ರಾಜ್ಯ ಕುರುಬರ ಸಂಘದ ನಿರ್ದೇಶಕ ಜಿ. ಅಜ್ಜಯ್ಯ, ಸಿಗೇನಹಳ್ಳಿ ಮಾರುತಿ ಸೇರಿದಂತೆ ಹಲವರು ಇದ್ದರು.