ವಿಜೃಂಭಣೆಯ ಬಸವ ಜಯಂತಿಗೆ ನಿರ್ಧಾರ
ಬಳ್ಳಾರಿ: ಬಸವ ಜಯಂತಿ ಅಂಗವಾಗಿ ಬಸವ ಸಮಿತಿ ಹಾಗೂ ವೀರಶೈವ ಸಮಾಜದವರು ನಗರದ ಪೊಲೀಸ್ ಜಿಮಖಾನಾದಲ್ಲಿ ಶನಿವಾರ ಸಂಜೆ ಪೂರ್ವಭಾವಿ ಸಿದ್ಧತೆ ನಡೆಸಿದರು. ಮೇ 13ರಂದು ಬೆಳಗ್ಗೆ 9 ಗಂಟೆಗೆ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. 9.30ಕ್ಕೆ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವೀರಶೈವ ಮುಖಂಡ ದರೂರು ಶಾಂತನಗೌಡ ಕೂಡಲಸಂಗಮದಿಂದ ಬಸವ ಜ್ಯೋತಿಯನ್ನು ತೆಗೆದುಕೊಂಡು ಬರಲಿದ್ದು, ಜ್ಯೋತಿಯನ್ನು ಬಸವದಳಕ್ಕೆ ತಲುಪಿಸಿ, ಅಲ್ಲಿಂದ ಮೇ 13ರಂದು ಬೆಳಗ್ಗೆ ಮೋತಿ ಸರ್ಕಲ್ನಲ್ಲಿರುವ ಬಸವಪುತ್ಥಳಿಗೆ ತಲುಪಿಸಲಿದ್ದಾರೆ. ಸಂಜೆ 4.30ರಿಂದ ಬಸವಣ್ಣನವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು. ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಬಸವ ಸಮಿತಿ ಸಂಚಾಲಕ ಮೀನಳ್ಳಿ ಚಂದ್ರಶೇಖರಗೌಡ, ಸಮಾಜದ ಮುಖಂಡರಾದ ಗುತ್ತಿಗನೂರು ವಿರೂಪಾಕ್ಷಗೌಡ, ಸಾಹುಕಾರ್ ಸತೀಶ್ಬಾಬು, ಸೋಮಲಿಂಗನಗೌಡ, ದರೂರು ಶಾಂತನಗೌಡ, ಬಂಡೇಗೌಡ, ಹಾಲೇಶ್ವರಗೌಡ, ಚಾನಾಳ್ ಶೇಖರ್ ಪಾಲ್ಗೊಂಡಿದ್ದರು.
ಇಂದು ರಥೋತ್ಸವ
ಕೊಟ್ಟೂರು: ಸಮೀಪದ ಹಾಳ್ಯಾ ಗ್ರಾಮದ ಶ್ರೀವರಗಳ ಬಸವೇಶ್ವರ ಸ್ವಾಮಿಯ ರಥೋತ್ಸವವು ಮೇ 13ರ ಸೋಮವಾರದಂದು ನಡೆಯಲಿದೆ. ರಥೋತ್ಸವದ ನಿಮಿತ್ತ ಮೇ 14ರ ಮಂಗಳವಾರದಂದು ಮಜಲು, ಜಾತ್ರೆ, ಓಕುಳಿ ಆಟ ನಡೆಯಲಿದೆ ಎಂದು ದೇವಸ್ಥಾನದ ದೈವಸ್ಥ ಬಳಗದವರು ತಿಳಿಸಿದ್ದಾರೆ.