ವೈದ್ಯಳಾಗುವ ಕನಸಿಗೆ ಬಡತನ ಅಡ್ಡಿ
ಹಗರಿಬೊಮ್ಮನಹಳ್ಳಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಂದೆ, ತಾಯಿ ನಿತ್ಯ ಕೂಲಿ ಮಾಡಿದರೆ ತುತ್ತು ಅನ್ನ, ಇಲ್ಲದಿದ್ದರೆ ಉಪವಾಸ. ಆದರೂ ಚೆನ್ನಾಗಿ ಓದಿ, ವೈದ್ಯಕೀಯ ಕೋರ್ಸ್ ಮಾಡಿ ಗ್ರಾಮೀಣ ಜನತೆಯ ಆರೋಗ್ಯ ರಕ್ಷಣೆ ಮಾಡಬೇಕೆಂಬುದು ಬಿಸಿಲೂರು ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದ ಪರಿಶಿಷ್ಟ ವರ್ಗ(ಎಸ್ಟಿ)ದ ಪ್ರತಿಭಾವಂತೆ ಕೆ. ಗಂಗಮ್ಮ ಕನಸು.
ಅತಿಯಾದ ಬಡತನ ವೈದ್ಯಳಾಗುವ ಈಕೆಯ ಕನಸಿಗೆ ಅಡ್ಡ ನಿಂತಿದೆ. ಈ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ 538 ಅಂಕ (ಶೇ. 89.6) ಗಳಿಸಿರುವ ಗಂಗಮ್ಮ, ಪಿಸಿಎಂಬಿಯಲ್ಲಿ ಶೇ. 93.25ರಷ್ಟು ಅಂಕ ಗಳಿಸಿದ್ದಾಳೆ. ಸಿಇಟಿ ಬರೆದಿದ್ದು, ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಸಿಗುವುದು ಖಚಿತ ಎನ್ನುತ್ತಿವೆ ಪ್ರಕಟವಾಗಿರುವ ಕೀ ಉತ್ತರಗಳು. ಗಂಗಮ್ಮ, ಆಕೆಯ ಪಾಲಕರಿಗೆ ಈಗ ಹಣ ಹೊಂದಿಸುವುದೇ ಚಿಂತೆ.
ಕನಸಿಗೆ ನೀರೆರೆಯಿರಿ: ಮನೆಯಲ್ಲಿ ಬಡತನವಿದ್ದರೂ ಅವರಿವರ ನೆರವಿನೊಂದಿಗೆ ಮಗಳನ್ನು ಪಿಯುಸಿ ವರೆಗೆ ಓದಿಸಿದ್ದೇವೆ. ಆದರೆ ಬಲು ವೆಚ್ಚದ ವೈದ್ಯಕೀಯ ಕೋರ್ಸ್ ಮಾಡಿ, ಹಳ್ಳಿಗಾಡಿನ ಜನತೆಯ ಆರೋಗ್ಯ ರಕ್ಷಣೆ ಮಾಡುವುದಾಗಿ ನಮ್ಮ ಮಗಳು ಕಂಡಿರುವ ಕನಸು ನನಸು ಮಾಡುವುದು ನಮ್ಮಿಂದ ಆಗದ ಕೆಲಸ ಎನ್ನುತ್ತಾರೆ ಆಕೆಯ ಹೆತ್ತವರು. ಸರ್ಕಾರಿ ಲೆಕ್ಕದಲ್ಲಿ ಸೀಟು ಸಿಕ್ಕರೂ ಕಾಲೇಜಿನ ಫೀಜು, ಹಾಸ್ಟೆಲ್ ಖರ್ಚು, ಪುಸ್ತಕ-ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಲು ತಗುಲುವ ವೆಚ್ಚ ಆಸ್ತಿ-ಪಾಸ್ತಿ ಇಲ್ಲದ ಬಡಕೂಲಿಕಾರ ಗಂಗಮ್ಮಳ ಪಾಲಕರಿಗೆ ಭರಿಸಲು ಅಸಾಧ್ಯ.
ಗಂಗಮ್ಮ ಪ್ರತಿಭಾವಂತೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. 92.32 ಅಂಕ ಗಳಿಸಿದ್ದಳು. ಓದಿನ ಕಡೆಗೆ ಈಕೆಗಿರುವ ಆಸಕ್ತಿಯನ್ನು ಮೆಚ್ಚಿ, ಪಿಯುಸಿ ವ್ಯಾಸಂಗ ಮಾಡಲು ನೆರವು ಒದಗಿಸಿದೆ. ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ವೈದ್ಯಕೀಯ ಕೋರ್ಸ್ ಮಾಡುವ ಗಂಗಮ್ಮಳ ಕನಸು ನನಸುಮಾಡಲು ನಾಡಿನಾದ್ಯಂತ ಇರುವ ಶಿಕ್ಷಣಪ್ರೇಮಿಗಳು ನೆರವಿನ ಹಸ್ತಚಾಚುವ ಮೂಲಕ ನೆರವಾಗಬೇಕು ಎನ್ನುತ್ತಾರೆ ಗಂಗಮ್ಮಳ ಪಿಯುಸಿ ವ್ಯಾಸಂಗಕ್ಕೆ ನೆರವು ನೀಡಿರುವ ತಾಪಂ ಸದಸ್ಯ ಉಪ್ಪಾರ ಬಾಲು.
ಪರಿಶಿಷ್ಟ ವರ್ಗದ ಬಡ ಪ್ರತಿಭಾವಂತೆ ಕೆ. ಗಂಗಮ್ಮ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 89.6 ಅಂಕ
ಅತಿಯಾದ ಬಡತನ ವೈದ್ಯಳಾಗುವ ಈಕೆಯ ಕನಸಿಗೆ ಅಡ್ಡ ನಿಂತಿದೆ. ಈ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ 538 ಅಂಕ (ಶೇ. 89.6) ಗಳಿಸಿರುವ ಗಂಗಮ್ಮ, ಪಿಸಿಎಂಬಿಯಲ್ಲಿ ಶೇ. 93.25ರಷ್ಟು ಅಂಕ ಗಳಿಸಿದ್ದಾಳೆ. ಸಿಇಟಿ ಬರೆದಿದ್ದು, ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಸಿಗುವುದು ಖಚಿತ ಎನ್ನುತ್ತಿವೆ ಪ್ರಕಟವಾಗಿರುವ ಕೀ ಉತ್ತರಗಳು. ಗಂಗಮ್ಮ, ಆಕೆಯ ಪಾಲಕರಿಗೆ ಈಗ ಹಣ ಹೊಂದಿಸುವುದೇ ಚಿಂತೆ.
ಕಷ್ಟದಲ್ಲೂ ಓದಿಸಿದ್ದಾರೆ
ಗಂಗಮ್ಮಳ ತಂದೆ ಗೋಣಿಬಸಪ್ಪ ಬಾಚಿಗೊಂಡನಹಳ್ಳಿಯಲ್ಲಿ ಹನುಮಂತ ದೇವರ ಪೂಜಾರಿ. ನಿತ್ಯ ಪೂಜೆ ಮುಗಿಸಿ ಪತ್ನಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಗಂಗಮ್ಮಳ ತಂಗಿ ಈ ಬಾರಿ ದ್ವಿತೀಯ ಪಿಯುಸಿ, ತಮ್ಮ ಎಸ್ಸೆಸ್ಸೆಲ್ಸಿ. ಮನೆಯಲ್ಲಿ ಬಡತನವಿದ್ದರೂ ಗಂಗಮ್ಮಳ ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಲು ಬಿಟ್ಟಿಲ್ಲ. ಗಂಗಮ್ಮಳ ವೈದ್ಯಕೀಯ ಕೋರ್ಸ್‌ಗೆ ನೆರವಾಗುವ ಆಸಕ್ತಿ ಇದ್ದವರು ಕರೆ ಮಾಡಿ- 9916714164.
-ಹುಳ್ಳಿ ಪ್ರಕಾಶ