ವರಿಷ್ಠರು ನೀಡಿದ ಜವಾಬ್ದಾರಿ ನಿರ್ವಹಿಸಲು ಸಿದ್ಧ: ಎಚ್ಕೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 14
ಕಾಂಗ್ರೆಸ್ ಪಕ್ಷದ ವರಿಷ್ಠರು ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸಲು ತಾವು ಸಿದ್ಧ ಎಂದು ಗದಗ ಶಾಸಕ, ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್ ಹೇಳಿದರು.
ಸೋಮವಾರ ಖಾಸಗಿ ಕಾರ್ಯಕ್ರಮ ಪ್ರಯುಕ್ತ ಹೂವಿನಹಡಗಲಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಉಪಮುಖ್ಯಮಂತ್ರಿ ಹುದ್ದೆಯನ್ನು ಹೆಚ್ಚಾಗಿ ಸೃಷ್ಟಿಸುವುದಿಲ್ಲ, ರಾಜ್ಯದಲ್ಲಿ ಸಾಕಷ್ಟು ಬಾರಿ ಕಾಂಗ್ರೆಸ್ ಆಡಳಿತ ನಡೆಸಿದೆ, ಆದರೆ ಅಗತ್ಯವಿದ್ದಾಗ ಮಾತ್ರ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದೆ. ಈವರೆಗೆ ಕಾಂಗ್ರೆಸ್ ಪಕ್ಷವು ಒಂದು ಬಾರಿ ಉಪಮುಖ್ಯಮಂತ್ರಿ ಸೃಷ್ಠಿಸಿದೆ. ಆಗ ತುಂಬಾ ಅಗತ್ಯವಿತ್ತು ಎಂದು ಹೇಳಿದ ಅವರು, ಒಟ್ಟಾರೆ ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸಲು ತಾವು ಸಿದ್ಧರಿರುವುದಾಗಿ ಹೇಳಿದರು.
ರಾಜಕೀಯ ಜೀವನದ ವಿಶ್ರಾಂತಿಯ ದಿನಗಳಲ್ಲಿ ತಾವು ಮಾಡಿರುವ ಯೋಚನೆಗಳಿಗೆ ಯೋಜನೆಯ ಸ್ವರೂಪ ನೀಡುವುದಾಗಿ ತಿಳಿಸುತ್ತಾ, ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಜನತೆಯ ಬಹು ದಿನಗಳ ಬೇಡಿಕೆಯಾಗಿರುವ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಹೋರಾಟಕ್ಕೆ ಒತ್ತಾಸೆಯಾಗಿ ನಿಲ್ಲುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಇರುವುದರಿಂದ ಈ ಬಾರಿ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆ ಜಾರಿಗೊಳ್ಳಲಿದೆ ಎಂಬ ವಿಶ್ವಾಸವಿದೆ. ರೈಲ್ವೆ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳೂ ಯೋಜನೆ ಕಾರ್ಯಗತಗೊಳಿಸಲು ಕೈ ಜೋಡಿಸಬೇಕಿದೆ ಎಂದ ಅವರು, ಹಿಂದುಳಿದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಯುವ ಮುಖಂಡ ಶ್ರೀಧರ್ ಐಗೋಳ ಇತರರು ಇದ್ದರು.