ಹಂಪಿ ಪ್ರವಾಸಕ್ಕೆ ನಗರ ಸಾರಿಗೆ ಮೆರುಗು
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮೇ 14
ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಗುಲ್ಬರ್ಗ ವಿಭಾಗದ ಸಾರಿಗೆ ಸಂಸ್ಥೆ ಹೊಸಪೇಟೆಯಲ್ಲಿ ನಗರ ಸಾರಿಗೆ ಬಸ್ ಸಂಚಾರ ಆರಂಭಿಸಿದೆ.
ಅನೇಕ ವರ್ಷಗಳ ಬೇಡಿಕೆಯಾಗಿದ್ದ ನಗರ ಸಾರಿಗೆ ಬಸ್ಗಳು ಈಗ ನಗರದ ಎಲ್ಲಾ ರಸ್ತೆಗಳಲ್ಲಿ ಹಸಿರು ಬಣ್ಣದ 'ವಿಜಯರಥ' ಹೆಸರಿನಲ್ಲಿ ಸಂಚರಿಸುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸುಮಾರು ರು. 5 ಕೋಟಿ ವೆಚ್ಚದಲ್ಲಿ 20 ಬಸ್ಗಳನ್ನು ಖರೀದಿಸಲಾಗಿದ್ದು, ನಗರದ 6 ಮಾರ್ಗಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸುತ್ತಿವೆ.
ಕೆಎಸ್ಆರ್ಟಿಸಿಯ ಗುಲ್ಬರ್ಗಾ ವಿಭಾಗದ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಜಿ. ಎನ್. ಶಿವಮೂರ್ತಿ ಹಾಗೂ ಸ್ಥಳೀಯ ಶಾಸಕ ಆನಂದ್ ಸಿಂಗ್ ಸೇರಿದಂತೆ ಸ್ಥಳೀಯ ಸಂಘ-ಸಂಸ್ಥೆಗಳ ಒತ್ತಾಯದ ಮೇರೆಗೆ ನಗರದಲ್ಲಿ 20 ನಗರ ಸಾರಿಗೆ ಬಸ್ಗಳ ಸಂಚಾರ ಆರಂಭಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.
ನಗರದಲ್ಲಿ ಜನ ಸಂದಣಿಯು ಅಧಿಕ ಮತ್ತು ನಗರದ ವ್ಯಾಪ್ತಿ ವಿಶಾಲವಾಗಿರುವುದರಿಂದ ಮನೆಯಿಂದ ಮಾರುಕಟ್ಟೆ, ಕಚೇರಿ, ಆಸ್ಪತ್ರೆ, ಶಾಲಾ-ಕಾಲೇಜು ಸೇರಿದಂತೆ ಇತರೆ ಪ್ರದೇಶಗಳಿಗೆ ನಗರ ಸಾರಿಗೆ ಬಸ್ಗಳಲ್ಲಿ ನಿಗದಿತ ಸಮಯಕ್ಕೆ ಉತ್ತಮ ಅವಕಾಶ ಲಭಿಸಿದೆ.
ಬಸ್ಗಳ ವೈಶಿಷ್ಟ್ಯ ಏನು?: ನವನವೀನ ಯೂರೋ ತ್ರೀಲೇಲ್ಯಾಂಡ್ ಬಸ್ನಲ್ಲಿ ಆಕರ್ಷಕ ಆಸನಗಳು, ಶುದ್ಧ ಗಾಳಿ ಹರಿದಾಡಲು ದೊಡ್ಡ ಕಿಟಕಿಗಳು, ಎರಡು ಬಾಗಿಲುಗಳು, ಮಹಿಳೆಯರಿಗೆ 12 ಸೀಟುಗಳು, ಹಿರಿಯರಿಗೆ ನಾಲ್ಕು ಸೀಟುಗಳನ್ನು ಕಾಯ್ದಿರಿಸಲಾಗಿದೆ. ನಗರ ಸಾರಿಗೆ ಬಸ್ಗಳಲ್ಲಿ ಈಗ ಜನರು ತಾ ಮುಂದು, ನಾ ಮುಂದು ಎನ್ನುವ ರೀತಿಯಲ್ಲಿ ಸಂಚರಿಸಿ ಹೊಸ ಅನುಭವ ಪಡೆದುಕೊಳ್ಳುತ್ತಿದ್ದಾರೆ.
ನಗರ ಸಾರಿಗೆ ಬಸ್ಗಳ ಮಾರ್ಗ: ಬಸ್ ನಿಲ್ದಾಣದಿಂದ ರೈಲು ನಿಲ್ದಾಣ, ರೈಲು ನಿಲ್ದಾಣದಿಂದ ಟಿ.ಬಿ. ಡ್ಯಾಂ, ಎಂ.ಪಿ. ಪ್ರಕಾಶ್ ನಗರದಿಂದ -ಟಿ.ಬಿ. ಡ್ಯಾಂ, ಕೇಂದ್ರ ಬಸ್ ನಿಲ್ದಾಣದಿಂದ ಹಂಪಿ-ಕಮಲಾಪುರ, ಚಿತ್ತವಾಡ್ಗಿಯಿಂದ-ಕಾರಿಗನೂರು ಸೇರಿದಂತೆ ನಗರದ ಪ್ರತಿಯೊಂದು ಮುಖ್ಯರಸ್ತೆಯಲ್ಲಿ ಹಾಗೂ ಮುಖ್ಯ ಸ್ಥಳದಲ್ಲಿ ನಗರ ಸಾರಿಗೆ ಬಸ್ಗಳು ಸಂಚಾರ ಆರಂಭಗೊಂಡಿವೆ. ಸಾರ್ವಜನಿಕರು ತಾವು ಪ್ರಯಾಣಿಸುವ ಪ್ರದೇಶಕ್ಕೆ ನಿಗದಿತ ಹಣವನ್ನು ನೀಡಿ ನಗರ ಸಾರಿಗೆಯಲ್ಲಿ ದಿನೇ ದಿನಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಕೇವಲ 7 ದಿನಕ್ಕೆ ಸುಮಾರು ರು. 3.63 ಲಕ್ಷ ಆದಾಯ ನಗರ ಸಾರಿಗೆಗೆ ಹರಿದು ಬಂದಿದೆ.
ಜಿಲ್ಲಾ ಕೇಂದ್ರದಂತಿರುವ ಹೊಸಪೇಟೆ ನಗರಕ್ಕೆ ಹಂಪಿ ವೀಕ್ಷಣೆ ಸೇರಿದಂತೆ ಇತರೆ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಬರುವ ದೇಶ-ವಿದೇಶದ ಪ್ರವಾಸಿಗರ ಮತ್ತು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಪ್ರಾರಂಭದಲ್ಲಿ ನಗರ ಸಾರಿಗೆ ಬಸ್ಗಳಲ್ಲಿ ಸಂಚಾರ ಮಾಡುವಾಗ ಕನಿಷ್ಠ ರು. 3ಗಳಿಗೆ ಪ್ರಯಾಣ ದರ ನಿಗದಿಪಡಿಸಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸದ್ಯದಲ್ಲೇ ರು. 20 ದರದಲ್ಲಿ ಒಂದು ದಿನದ ರಿಯಾಯಿತಿ ಬಸ್ಪಾಸ್ ಹಾಗೂ ರು. 500 ಮಾಸಿಕ ಬಸ್ಪಾಸ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ತಿಳಿಸಿದ್ದಾರೆ.
ಸಿ.ಕೆ. ನಾಗರಾಜ್