ಗೋಲ್ಡನ್ ಲಗ್ನ ಪತ್ರಿಕೆ
ಕ.ಪ್ರ. ವಾರ್ತೆ , ಬಳ್ಳಾರಿ , ಮೇ 15
ಈ ಲಗ್ನಪತ್ರಿಕೆಯನ್ನೊಮ್ಮೆ ನೋಡಿ, ಇದು ಸಾಧಾರಣ ಲಗ್ನಪತ್ರಿಕೆಯಲ್ಲ. ಇದಕ್ಕೆ ವೆಚ್ಚವಾದ ಬೆಲೆ ಬರೋಬ್ಬರಿ 15 ಸಾವಿರ...!
ಅದರಲ್ಲೇನಿದೆ ಅಂತ ಮಹಾ ಅಂತೀರಾ? ಇದಕ್ಕೆ ಉಪಯೋಗಿಸಲಾದ ಮೆಟಿರೀಯಲ್ಸ್ ಇಟಲಿಯದ್ದು. ಅಷ್ಟೇ ಅಲ್ಲ, ಇದನ್ನು ಲಾಸ್ ಏಂಜಲೀಸ್ ಡಿಸೈನ್ನಿಂದ ವಿನ್ಯಾಸಗೊಳಿಸಲಾಗಿದ್ದು, ನವದೆಹಲಿಯ ರಾವೀಶ್ ಕಪೂರ್ ಸಂಸ್ಥೆ ಮುದ್ರಿಸಿದೆ. ಇದು ಬಳ್ಳಾರಿ ಮಾಜಿ ಶಾಸಕ, ಉದ್ಯಮಿ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ಶರತ್ ರೆಡ್ಡಿ ಮದುವೆ ಆಹ್ವಾನ ಪತ್ರಿಕೆ.
ಚಿತ್ರನಟಿ ಶಿಲ್ಪಾ ಶೆಟ್ಟಿ ತಮ್ಮ ಮದುವೆಗೆ 12 ಸಾವಿರ ವೆಚ್ಚದ ಲಗ್ನ ಪತ್ರಿಕೆ ಮುದ್ರಿಸಿ ಗಮನ ಸೆಳೆದಿದ್ದರು. ಇದೀಗ ಅವರನ್ನು ಮೀರಿ 15 ಸಾವಿರ ವೆಚ್ಚದ ಲಗ್ನ ಪತ್ರಿಕೆಯನ್ನು ಸೂರ್ಯನಾರಾಯಣ ರೆಡ್ಡಿ ತಮ್ಮ ಮಗನ ಮದ್ವೆಗೆ ಮುದ್ರಿಸಿದ್ದಾರೆ.
ದೆಹಲಿಯಲ್ಲಿ ಮುದ್ರಣ: ಈ ಲಗ್ನ ಪತ್ರಿಕೆಯನ್ನು ದೇಶದ ರಾಜಾಧಾನಿ ನವದೆಹಲಿಯಲ್ಲಿ ಮುದ್ರಿಸಿದ್ದು, ಅಲ್ಲಿನ ರಾವೀಶ್ ಕಪೂರ್ ಸಂಸ್ಥೆ ಇಂಥ ದುಬಾರಿ ಲಗ್ನ ಪತ್ರಿಕೆಯನ್ನು ಮುದ್ರಿಸಿ ಕೊಟ್ಟಿದೆ. 14 ಪುಟಗಳ ಲಗ್ನ ಪತ್ರಿಕೆಯಲ್ಲಿ ವಿವಾಹ ಆಮಂತ್ರಣದ ಅಕ್ಕಪಕ್ಕದಲ್ಲಿ ಗೋಲ್ಡ್ ಕೋಟೆಡ್ ವಧು-ವರರ ಚಿತ್ರವಿರುವ ಉದ್ದನೆಯ ಕವರ್ಗಳಿವೆ. ಅದರಲ್ಲಿ ದುಬೈ ಚಾಕೋಲೆಟ್ಗಳಿದ್ದು, ಅವುಗಳನ್ನು ಸವಿಯುತ್ತ ಲಗ್ನ ಪತ್ರಿಕೆ ನೋಡಬಹುದು.
ಆಕರ್ಷಕ ಕುಸುರಿ: ಆಹ್ವಾನ ಪತ್ರಿಕೆಯಲ್ಲಿರುವ ಕುಸುರಿ ನೋಡುವುದೇ ಒಂದು ಸೊಗಸು. ಲಗ್ನ ಪತ್ರಿಕೆ ತೆರೆಯುವುದಕ್ಕೂ ಮೊದಲು ವಧು-ವರನ ಹೆಸರು ಶರತ್, ಅತ್ಮೀಕಾ ಎಂದು ಬರೆಯಲಾಗಿದೆ. ಪುಟ ತಿರುವಿದರೆ ಅಲ್ಲಿ ಗ್ಲಾಸ್ ಶೀಟ್ ಕವರ್ ಹಾಕಲಾಗಿದೆ. ಎರಡು ಕಡೆಗಳಲ್ಲಿ ಉದ್ದನೆಯ ರೇಷ್ಮೆ ಕವರಿನ ಎರಡು ಬಾಕ್ಸ್ಗಳಲ್ಲಿ ದುಬೈಯ ಡ್ರೈಫ್ರೂಟ್ಸ್ ಮತ್ತು ಚಾಕೋಲೆಟ್ಗಳನ್ನಿಡಲಾಗಿದೆ. ಮೊದಲ ಪುಟದಲ್ಲಿ ಗೋಲ್ಡ್ ಕೋಟ್ನಿಂದ ತಯಾರಿಸಿದ ಗಣೇಶನ ಚಿತ್ರವಿದೆ.
14 ಪುಟಗಳಲ್ಲಿ ಆಹ್ವಾನ ಪತ್ರಿಕೆಯ ಪ್ರತಿ ಪುಟದಲ್ಲಿಯೂ ಒಂದೊಂದು ವಿಶೇಷ ಚಿತ್ರವನ್ನು ಮುದ್ರಿಸಲಾಗಿದೆ. ಮೊದಲನೇ ಚಿತ್ರದಲ್ಲಿ ಗೋಲ್ಡ್ ಕೋಟೆಡ್ ಗಣೇಶನ ಚಿತ್ರ, 2ನೇ ಪುಟದಲ್ಲಿ ನವ ವಧು-ವರರ ಹೆಸರು, 3ನೇ ಪುಟ ರೆಡ್ಡಿ ಸಂಪ್ರದಾಯದಂತೆ ಮಾಡುವ ನಲುಗು ಕಾರ್ಯಕ್ರಮದ ವಿವರ, 4ನೇ ಪುಟದಲ್ಲಿ ವಿವಾಹದ ಸ್ಥಳ, ದಿನಾಂಕ, ಸಮಯ, 5ನೇ ಪುಟದಲ್ಲಿ ಆರತಕ್ಷತೆ, 6 ಪುಟದಲ್ಲಿ ಬೆಸ್ಟ್ ಕಾಂಪ್ಲಿಮೆಂಟ್ಸ್, 7ನೇ ಪುಟದಲ್ಲಿ ವಿಐಪಿ ಪಾಸ್ ಸೇರಿದಂತೆ ಎಲ್ಲ ವಿಷಯಗಳನ್ನೊಳಗೊಂಡ ವಿವರಗಳಿವೆ.
ಕಾರ್ಯಕ್ರಮದ ವಿವರಗಳನ್ನು ಗೋಲ್ಡ್ ಕೋಟೆಡ್ ಲೇಟರ್ಗಳಲ್ಲಿ ಮುದ್ರಿಸಲಾಗಿದೆ. ಕಂದು ಬಣ್ಣದ ಪತ್ರಿಕೆ ಮೇಲೆ ಕ್ಯಾಲಿಯೋಗ್ರಫಿ ಆರ್ಟ್ ಮಾಡಲಾಗಿದೆ. ಆಹ್ವಾನ ಪತ್ರಿಕೆಯ ಅಂಚುಗಳಿಗೆ ಬಂಗಾರ ವರ್ಣದ ಸೂಕ್ಷ್ಮ ಕುಸುರಿ ಕೆಲಸ ಮಾಡಲಾಗಿದೆ. ಲಗ್ನ ಪತ್ರಿಕೆ ಒಂದೂವರೆ ಅಡಿ ಉದ್ದ, ಒಂದು ಅಡಿ ಅಗಲವಿದೆ.
29ರಂದು ಚೆನ್ನೈನಲ್ಲಿ ವಿವಾಹ: ರವೀಸ್ ಕಪೂರ್ ಸಂಸ್ಥೆ ಕೇವಲ ಪ್ರತಿಷ್ಠಿತ ಕಂಪನಿಗಳ ಪ್ರೊಫೈಲ್ ನೋಡಿ ಪತ್ರಿಕೆಗೆ ಮುದ್ರಣಕ್ಕೆ ಒಪ್ಪಂದ ಮಾಡಿಕೊಳ್ಳುತ್ತದೆ. ಒಬ್ಬರಿಗೆ ಮಾಡಿಕೊಟ್ಟ ಲಗ್ನ ಪತ್ರಿಕೆಯ ಡಿಸೈನ್ ಅನ್ನು ಮತ್ತೊಬ್ಬರಿಗೆ ಮಾಡಿ ಕೊಡುವುದಿಲ್ಲ. ಅಂದ ಹಾಗೆ ಅವರ ಮದುವೆ ಮೇ 29ರಂದು ಚೆನ್ನೈನ ಲೀಲಾ ಪ್ಯಾಲೇಸ್ನಲ್ಲಿ ನಡೆಯಲಿದೆ.
ಇನ್ನು ಇವರ ಆರತಕ್ಷತೆಯು ಜೂ.3ರಂದು ಬಳ್ಳಾರಿಯ ಮೋಕಾ ರಸ್ತೆಯ ನಳಂದಾ ಶಾಲೆಯ ಆವರಣದಲ್ಲಿ ನಡೆಯಲಿದೆ. ಒಟ್ಟು ನಾಲ್ಕು ತರಹದ ಲಗ್ನ ಪತ್ರಿಕೆಗಳನ್ನು ವಿವಿಧ ವೆಚ್ಚದಲ್ಲಿ ಮುದ್ರಿಸಲಾಗಿದೆ. 7 ಸಾವಿರ, 2,500 ಬೆಲೆ ಬಾಳುವ ಪತ್ರಿಕೆಗಳನ್ನು ಮುದ್ರಿಸಿದ್ದಾರೆ.
-ಶಶಿಧರ ಮೇಟಿ