22 ಕಾಲೇಜುಗಳ ಕೋರ್ಸ್ಗೆ ಪ್ರವೇಶ ಸ್ಥಗಿತ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 16
ಮೂಲ ಸೌಲಭ್ಯ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಅರ್ಹ ಉಪನ್ಯಾಸಕರಿಲ್ಲದ ಹಿನ್ನೆಲೆಯಲ್ಲಿ ಬಳ್ಳಾರಿ, ಕೊಪ್ಪಳ ಜಿಲ್ಲೆಯ ಬಿ.ಇಡಿ, ಎಂಎಸ್ಡಬ್ಲ್ಯೂ, ಎಂ.ಇಡಿಯ 22 ಕಾಲೇಜುಗಳ ವಿವಿಧ ಕೋರ್ಸ್ಗಳಿಗೆ 2013-14ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶ ಪಡೆಯುವುದನ್ನು ಸ್ಥಗಿತಗೊಳಿಸಿ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಆದೇಶ ಹೊರಡಿಸಿದೆ.
ಎರಡು ವರ್ಷಗಳಿಂದ ಎಚ್ಚರಿಕೆ ನೀಡಿದರೂ, ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ವಿವಿ ಇಂತಹ ಕ್ರಮಕ್ಕೆ ಮುಂದಾಗಿದೆ. ವಿವಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಿಸಿದ ವಿವಿ ಕುಲಪತಿ ಮಂಜಪ್ಪ ಡಿ. ಹೊಸಮನಿ, ಬಳ್ಳಾರಿಯ ಸತ್ಯಂ ಕಾಲೇಜ್ ಆಫ್ ಎಂಎಸ್ಡಬ್ಲ್ಯೂ, ಶಶಾಂಕ್ ಇನ್ಸ್ಟಿಟ್ಯೂಟ್ ಆಫ್ ಎಂಎಸ್ಡಬ್ಲ್ಯೂ, ಕೊಟ್ಟೂರಿನ ಎನ್ಬಿ ಎಂಎಸ್ಡಬ್ಲ್ಯೂ ಕಾಲೇಜು, ಕೊಪ್ಪಳದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಎಸ್ಡಬ್ಲ್ಯೂ , ಆರ್ಡಿಟಿಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸ್ಟಡೀಸ್ ಆ್ಯಂಡ್ ರೀಸರ್ಚ್ನ ಎಂಎಸ್ಡಬ್ಲ್ಯೂನ್ನು ಪ್ರಸಕ್ತ ವರ್ಷ ಸ್ಥಗಿತಗೊಳಿಸಲಾಗಿದೆ ಎಂದರು.
ಪ್ರವೇಶ ಸ್ಥಗಿತ: ಗಂಗಾವತಿಯ ಎಸ್ಕೆಎನ್ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂಎ (ಇತಿಹಾಸ, ಅರ್ಥಶಾಸ್ತ್ರ), ಎಂಎಸ್ಸಿ (ಭೌತಶಾಸ್ತ್ರ), ಬಳ್ಳಾರಿಯ ಸತ್ಯಂ ಬಿ.ಇಡಿ ಹಾಗೂ ಎಂ.ಇಡಿ, ಕೂಡ್ಲಿಗಿಯ ಜ್ಞಾನಭಾರತಿ ಬಿ.ಇಡಿ. ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬಿ.ಇಡಿ, ಕೊಪ್ಪಳದ ರಾಜೀವಗಾಂಧಿ ರೂರಲ್ ಕಾಲೇಜ್ ಆಫ್ ಎಜುಕೇಷನ್ ಬಿ.ಇಡಿ ಹಾಗೂ ಎಂ.ಇಡಿ, ಯಲಬುರ್ಗಾದ ಎಸ್.ಎ. ನಿಂಗೋಜಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ, ಬಳ್ಳಾರಿಯ ರಾಯಲ್ ಶಿಕ್ಷಣ ಮಹಾವಿದ್ಯಾಲಯ ಬಿ.ಇಡಿ, ಕುಷ್ಟಗಿಯ ಶ್ರೀ ವಿಜಯಚಂದ್ರ ಶೇಖರ ಶಿಕ್ಷಣ ಮಹಾವಿದ್ಯಾಲಯ ಬಿ.ಇಡಿ, ಕೊಟ್ಟೂರಿನ ತುಂಗಭದ್ರಾ ಬಿ.ಇಡಿ ಕಾಲೇಜು, ಬಳ್ಳಾರಿಯ ಸೋನಿಯಾಗಾಂಧಿ ಬಿ.ಇಡಿ ಕಾಲೇಜು ಹಾಗೂ ಸಪ್ತಗಿರಿ ಡಿಗ್ರಿ ಕಾಲೇಜಿನಲ್ಲಿ ಬಿ.ಕಾಂ. ಪ್ರವೇಶ ಸ್ಥಗಿತಗೊಳಿಸಲಾಗಿದೆ.
ಅಗತ್ಯ ಸೌಕರ್ಯ ಇಲ್ಲ: ಕೊಪ್ಪಳದ ಕೆ.ವಿ.ವಿ. ಟ್ರಸ್ಟ್ನ ಕೇದಾರಲಿಂಗ ಬಿಸಿಎ ಕಾಲೇಜಿನ ಬಿಸಿಎ, ಶ್ರೀ ವಿಶ್ವಭಾರತಿ ವಿದ್ಯಾಸಂಸ್ಥೆಯ ಬಿಕಾಂ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಡಿಗ್ರಿ ಕಾಲೇಜನ ಬಿಎ, ಬಿಕಾಂ ಹಾಗೂ ಹೊಸಪೇಟೆಯ ವಿಕಾಸ ಡಿಗ್ರಿ ಕಾಲೇಜಿನ ಬಿಎ, ಬಿಕಾಂ ಕೋರ್ಸ್ಗಳ ಪ್ರವೇಶಕ್ಕೆ ಒಂದು ವರ್ಷದ ಅವಧಿಗೆ ಷರತ್ತುಗೊಳಪಡಿಸಿ ಸ್ಥಗಿತಗೊಳಿಸಲಾಗಿದೆ. ಒಂದು ವರ್ಷದೊಳಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಡಾಕ್ಟರೇಟ್, ಯುಜಿಸಿ, ಸ್ಲೆಟ್, ನೆಟ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಸ್ನಾತಕೋತ್ತರ ಪದವೀಧರರನ್ನು ಉಪನ್ಯಾಸಕರನ್ನಾಗಿ ನೇಮಿಸಿಕೊಂಡ ನಂತರ ಪರಿಶೀಲಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪರಿಗಣಿಸಲಾಗುವುದು. ನಾಲ್ಕೈದು ವರ್ಷಗಳ ಹಿಂದೆಯೇ ಕಾಲೇಜುಗಳನ್ನು ಪ್ರಾರಂಭಿಸಿ ಈವರೆಗೆ ಅಗತ್ಯ ಸೌಕರ್ಯ ನೀಡದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮೂರು ಹೊಸ ಕಾಲೇಜಿಗೆ ಅನುಮತಿ: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಕಾಲೇಜು ಆರಂಭಿಸಲು 6 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಪರಿಶೀಲಿಸಿ 3 ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಕೂಡ್ಲಿಗಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪದವಿ ಕಾಲೇಜು, ಹಗರಿಬೊಮ್ಮನಹಳ್ಳಿಯ ಶ್ರೀ ರೇಣುಕಾ ಪದವಿ ಕಾಲೇಜು ಹಾಗೂ ಹೊಸಪೇಟೆಯ ಮಲ್ಲಿಗೆ ಎಜುಕೇಶನ್ ಟ್ರಸ್ಟ್ಗೆ ನೂತನ ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಹೊಸಪೇಟೆಯ ಪಿಎನ್ಎಂಇ ಟ್ರಸ್ಟ್, ಗಂಗಾವತಿಯ ಜನತಾ ಸೇವಾ ಎಜುಕೇಷನ್ ಸೊಸೈಟಿ ಹಾಗೂ ಬಳ್ಳಾರಿಯ ಸಾಯಿ ಪಬ್ಲಿಕ್ ಕಾಲೇಜುಗಳಿಗೆ ವಿವಿಧ ಕಾರಣಗಳಿಂದ ಅನುಮತಿ ನೀಡದೆ ನಿರಾಕರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿ ಕುಲಸಚಿವ ಡಾ. ಕಾಟೆಪಾಗ ವಿಜಯಕುಮಾರ್, ಮೌಲ್ಯಮಾಪನ ಕುಲಸಚಿವ ಡಾ. ರಂಗರಾಜ ವನದುರ್ಗ ಇದ್ದರು.