ಅರೆ ಬರೆ ಕಾಮಗಾರಿ: ಚರಂಡಿಗೆ ಕಾರು
ಕೊಟ್ಟೂರು: ಸ್ಥಳೀಯ ಪಪಂ ಮತ್ತು ಲೋಕೋಪಯೋಗಿ ಇಲಾಖೆಯವರ ಅರೆ ಬರೆ ಕಾಮಗಾರಿ ನಿರ್ವಹಣೆಯಿಂದಾಗಿ ಪಟ್ಟಣದಲ್ಲಿನ ಗಾಂಧಿ ವೃತ್ತದ ಬಳಿ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ವಾಹನ ಚಾಲಕರು, ಸಾರ್ವಜನಿಕರು ದಿನನಿತ್ಯ ಫಜೀತಿಗೆ ಒಳಗಾಗುತ್ತಿದ್ದಾರೆ. ಗಾಂಧಿ ವೃತ್ತದ ಪಕ್ಕದಲ್ಲೇ ಇರುವ, ಉಜ್ಜಿನಿ-ಕೂಡ್ಲಿಗಿ-ಹರಪನಹಳ್ಳಿ ರಸ್ತೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಅಭಿವೃದ್ಧಿಗೆಂದು ಮೊದಲಿನ ರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗಿದೆ. 4-5 ತಿಂಗಳು ಗತಿಸಿದರೂ ರಸ್ತೆಯನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗದೇ ಇದ್ದ ಪರಿಣಾಮ ಬುಧವಾರ ಈ ಮಾರ್ಗದ ಮೂಲಕ ಸಾಗುತ್ತಿದ್ದ ಕಾರೊಂದು ಹಠಾತ್ತನೆ ಆಯತಪ್ಪಿ ಚರಂಡಿಯೊಳಗೆ ಸಿಲುಕಿಕೊಂಡಿತು. ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದೂ ಈ ರಸ್ತೆ ಗುಂಟಲೇ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಈ ಮಾರ್ಗದುದ್ದಕ್ಕೂ ಸಂಚರಿಸುವ ದಾರಿಹೋಕರು ಮತ್ತು ವಾಹನ ಸಂಚಾರರು ಈ ಕುರಿತು ಸ್ಥಳೀಯ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆಯವರ ಗಮನ ಸೆಳೆದು ರಸ್ತೆ ದುರಸ್ತಿಗೆ ಈ ಹಿಂದೆ ಒತ್ತಾಯಿಸಿದರು. ಇದಕ್ಕೆ ಕಿವಿಗೊಡದ ಅಧಿಕಾರಿಗಳು ಅದ್ವಾನ ರಸ್ತೆಯನ್ನು ದುರಸ್ತಿಗೊಳಿಸುವುದಕ್ಕೆ ಇನ್ನೂ ತೊಡಗಿಸಿಕೊಂಡಿಲ್ಲ. ಹಲವು ಬಗೆಯ ಸಣ್ಣಪುಟ್ಟ ಅಪಘಾತಗಳು ಈಗಾಗಲೇ ಸಂಭವಿಸಿವೆ. ಆದರೂ ಗಮನ ಹರಿಸಿಲ್ಲ ಎಂದು ಪಟ್ಟಣದ ಮುದುಕಪ್ಪ 'ಕನ್ನಡಪ್ರಭ'ಕ್ಕೆ ಬುಧವಾರ ತಿಳಿಸಿದರು.