ಈಕರಾಸಾ ಸಂಸ್ಥೆಗೆ ಅಭಿನಂದನೆ
ಬಳ್ಳಾರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಳ್ಳಾರಿ ನಗರದಲ್ಲಿ ಸಾರ್ವಜನಿಕರ ಸದುಪಯೋಗಕ್ಕಾಗಿ ಕಡಿಮೆ ದರದಲ್ಲಿ ಸಂಚರಿಸಲು 33 ಅತ್ಯಾಧುನಿಕ ಭುವನ ವಿಜಯ ಬಸ್ಗಳನ್ನು ಪ್ರಾರಂಭಿಸಿರುವುದನ್ನು ಕೆಎಸ್ಆರ್ಟಿಸಿ ನೌಕರರ ಸಂಘಟನೆಗಳು ಸ್ವಾಗತಿಸಿವೆ. ಎಐಟಿಯುಸಿ ಸಂಯೋಜಿತ ಕೆಎಸ್ಆರ್ಟಿಸಿ ಸಿಬ್ಬಂದಿ, ಕಾರ್ಮಿಕರ ಸಂಘ, ನೌಕರರ ಸಂಘಟನೆಗಳು ಈ ಕುರಿತು ಪ್ರತ್ಯೇಕ ಪತ್ರಿಕಾ ಹೇಳಿಕೆ ನೀಡಿದ್ದು, ಬಳ್ಳಾರಿ ನಗರದ ನಾಗರಿಕರ ಬಹುದಿನಗಳ ಬೇಡಿಕೆಯಾಗಿದ್ದ ಸಿಟಿ ಬಸ್ಗಳನ್ನು ಭುವನ ವಿಜಯ ಹೆಸರಿನಲ್ಲಿ ನಗರಾದ್ಯಂತ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲು ಅನುಕೂಲ ಕಲ್ಪಿಸಿರುವುದು ನಿಜಕ್ಕೂ ಅಭಿನಂದನೀಯ ಎಂದು ತಿಳಿಸಿವೆ. ಈಕರಾಸಾ ಸಂಸ್ಥೆ ವ್ಯವಸ್ಥಾಪಕ ಜಿ.ಎನ್. ಶಿವಮೂರ್ತಿ ಅವರು ಆಸಕ್ತಿ ವಹಿಸಿ, ದೂರದೃಷ್ಟಿಯಿಂದ ಪ್ರಾರಂಭಿಸಿರುವ ಈ ಹೊಸ ಮಾದರಿಯ ಬಸ್ಗಳು ಆಕರ್ಷಕವಾಗಿವೆ. ರು. 3, 5, 7 ದರ ನಿಗದಿಪಡಿಸಲಾಗಿದೆ. ಜನತೆ ಕೈಗೆಟಕುವ ದರದಲ್ಲಿ ಈ ಬಸ್ಗಳಲ್ಲಿ ಸಂಚರಿಸುವ ಮೂಲಕ ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಎಐಟಿಯುಸಿ ಅಧ್ಯಕ್ಷ ಎಚ್.ಎ. ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿ ಕಾಂತಯ್ಯ ಗುತ್ತರಗಿಮಠ ಹಾಗೂ ಐಎನ್ಟಿಯುಸಿ ಅಧ್ಯಕ್ಷ ಸೈಯ್ಯದ್ ಹಫೀಜ್, ಕಾರ್ಯಾಧ್ಯಕ್ಷ ಬಿ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ವಿ.ಕೆ. ಹಿರೇಮಠ ಮತ್ತಿತರರು ಅಭಿನಂದಿಸಿದ್ದಾರೆ.