ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜನಪರ ಹೋರಾಟ ಮುಂದುವರಿಸುತ್ತೇನೆ

Mainashree
Updated On : 17 May 2013, 10:16 am

ಬಳ್ಳಾರಿ: ಸೋಲು-ಗೆಲುವಿನ ಮೆಟ್ಟಿಲಾಗಿದ್ದು, ಸೋಲನ್ನು ಸವಾಲಾಗಿ ಸ್ವೀಕರಿಸಿ, ತಮ್ಮ ರಾಜಕೀಯ ಹೋರಾಟ ಮುಂದುವರಿಸುತ್ತೇನೆ ಎಂದು ಬಿಎಸ್‌ಆರ್ ಮುಖಂಡ, ಬಳ್ಳಾರಿ ನಗರ ಕ್ಷೇತ್ರದ ಬಿಎಸ್‌ಆರ್ ಪರಾಜಿತ ಅಭ್ಯರ್ಥಿ ಮುರಳೀಕೃಷ್ಣ ಹೇಳಿದ್ದಾರೆ.
ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋತಿರುವುದರಿಂದ ಧೃತಿಗೆಡದೆ, ಇಂದಿನಿಂದ ಎಲ್ಲ ವಾರ್ಡ್‌ಗಳಿಗೆ ತೆರಳಿ, ಮತದಾರರನ್ನು ಖುದ್ದಾಗಿ ಭೇಟಿ ಮಾಡಿ ಧನ್ಯವಾದ ಹೇಳುತ್ತೇನೆ. ಆಯಾ ವಾರ್ಡ್‌ಗಳ ಸಮಸ್ಯೆಯನ್ನು ಪಟ್ಟಿ ಮಾಡಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ. ಅಧಿಕಾರ ಇಲ್ಲದಿದ್ದರೂ, ಜನರ ಸಮಸ್ಯೆಗಳ ಪರಿಹರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಪ್ರತಿ ಭಾನುವಾರ ಆಯಾ ವಾರ್ಡ್‌ಗಳ ಮುಖಂಡರ ಸಭೆ ಕರೆದು ಪಕ್ಷದ ಸಂಘಟನೆ ಮಾಡುತ್ತೇವೆ. ಕೆಲವೇ ದಿನಗಳಲ್ಲಿಯೇ ಬಳ್ಳಾರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಪಕ್ಷದ ಎಲ್ಲ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿ, ಮಾರ್ಗದರ್ಶನ ನೀಡಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಳ್ಳಾರಿಯ ಮತದಾರರ ಬಿಎಸ್‌ಆರ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸ ತಮಗಿದೆ. ಮುಂದಿನ ಚುನಾವಣೆಯಲ್ಲಿ ಬಿಎಸ್‌ಆರ್ ಪಕ್ಷವನ್ನು ಗೆಲ್ಲಿಸುವುದು ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
ಬಳ್ಳಾರಿ ಜನತೆ ನೀಡಿದ ತೀರ್ಪನ್ನು ಗೌರವಯುತವಾಗಿ ಸ್ವಾಗತಿಸುತ್ತೇವೆ. ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡಿದ ಪಕ್ಷದ ಎಲ್ಲ ಕಾರ್ಯಕರ್ತರಿಗೆ, ಮುಖಂಡರಿಗೆ ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷದ ಮುಖಂಡರಾದ ಜಿ. ಸೋಮಶೇಖರ ರೆಡ್ಡಿ, ಸಂಸದೆ ಜೆ. ಶಾಂತಾ, ಸಣ್ಣ ಫಕ್ಕೀರಪ್ಪ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಮುಖಂಡ ಜಿ. ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಅವರಿಗೆ ಕೃತಜ್ಞನಾಗಿದ್ದೇನೆ ಎಂದರು.
ಸಂಸದೆ ಜೆ. ಶಾಂತಾ ಮಾತನಾಡಿ, ಸಂಘಟನೆ ಕೊರತೆಯಿಂದ ಬಿಎಸ್‌ಆರ್ ಸೋಲು ಅನುಭವಿಸಬೇಕಾಯಿತು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಮುಂದಿನ ಚುನಾವಣೆಗೆ ಅಣಿಗೊಳಿಸಲಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಪಕ್ಷದ ಮುಖಂಡರು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಬಸವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement