ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶತಮಾನದ ಜಾತ್ರೆಗೆ ಅಬ್ಬರದ ಸಿದ್ಧತೆ

Mainashree
Updated On : 17 May 2013, 10:15 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 16
ಪಶ್ಚಿಮಾಭಿಮುಖವಾಗಿ ಹರಿಯುವ ತುಂಗಭದ್ರೆ ತಟದಲ್ಲಿರುವ ಪವಿತ್ರ ಸುಕ್ಷೇತ್ರ ಮಾಗಳ ಗ್ರಾಮದ ಶತಮಾನದ ಗ್ರಾಮದೇವತೆ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆದಿದೆ. ಮೇ 17ರಿಂದ 24ರವರೆಗೆ 8 ದಿನಗಳ ಕಾಲ ಈ ಜಾತ್ರಾ ಮಹೋತ್ಸವ ಜರುಗಲಿದೆ.
ಬ್ರಿಟಿಷರ ಕಾಲದಿಂದಲೂ ಬಳ್ಳಾರಿ ಜಿಲ್ಲೆಯಲ್ಲೇ ಅತಿದೊಡ್ಡ ಕಂದಾಯ ಗ್ರಾಮವೆಂಬ ಹೆಗ್ಗಳಿಕೆಯನ್ನು ಮಾಗಳ ಹೊಂದಿದೆ. ಬನ್ನಿಮಟ್ಟಿ ಲೆಂಕೆಪ್ಪ, ನೆಗಳೂರು ಧರ್ಮಣ್ಣ, ಏಕಾಂಬ್ರಪ್ಪ ಎಂಬ ಸ್ವಾತಂತ್ರ್ಯ ಹೋರಾಟಗಾರರನ್ನು ಕಂಡಿರುವ ಈ ಗ್ರಾಮವೀಗ ಗ್ರಾಮದೇವತೆ ಜಾತ್ರೆಗೆ ಮದುವಣಗಿತ್ತೆಯಂತೆ ಸಿಂಗಾರಗೊಳ್ಳುತ್ತಿದೆ.
ಐತಿಹಾಸಿಕ ಹಿನ್ನೆಲೆ: ಮಾಗಳ-ರಂಗಾಪುರ ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿರುವ ಪವಿತ್ರ ಸುಕ್ಷೇತ್ರ. ಹಚ್ಚ ಹಸಿರಿನ ಸುಂದರ ಪ್ರಕೃತಿ ಮಡಿಲಲ್ಲಿ ಕಲ್ಯಾಣದ ಚಾಲುಕ್ಯರು, ಹೊಯ್ಸರು, ವಿಜಯನಗರ ಅರಸರ ಕಾಲದ ಶಿಲ್ಪಕಲಾ ವೈಭವ ಹೊಂದಿರುವ ಸೂರ್ಯನಾರಾಯಣ, ವೇಣುಗೋಪಾಲ ಸ್ವಾಮಿ, ಗಣೇಶ, ನಂದಿ, ಮಹಾಲಿಂಗು, ಉಗ್ರನರಸಿಂಹ ಸ್ವಾಮಿ, ಮಹಾಲಕ್ಷ್ಮಿ, ಭಕ್ತ ಪ್ರಹ್ಲಾದ, ಕಾಲಭೈರವ, ವಾಲಿ, ಆಂಜನೇಯ, ದತ್ತಾತ್ರೇಯ ಪಾದುಕೆ, ಮಹಾಲಿಂಗೇಶ್ವರ ದೇವಸ್ಥಾನಗಳ ಶಿಲ್ಪಕಲಾ ವೈಭವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಇದಲ್ಲದೇ ಕನ್ನಡ ಸಾಹಿತ್ಯ ಲೋಕವನ್ನು ತಮ್ಮ 13 ಕೃತಿಗಳಿಂದ ಶ್ರೀಮಂತಗೊಳಿಸಿರುವ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಯವರು, 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ನಾಡೋಜ, ವ್ಯಾಕರಣ ತೀರ್ಥ ಸೇರಿದಂತೆ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ರಾಜ್ಯಕ್ಕೆ ಮಾಗಳ ಗ್ರಾಮವನ್ನು ಪರಿಚಯಿಸಿದ್ದಾರೆ.
ಕೆಲ ಕಾರಣಗಳಿಂದ ಶತಮಾನಗಳಿಂದಲೂ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆ ನಡೆದಿರಲಿಲ್ಲ. ಈ ಕುರಿತು ಯಾವಾಗ ಜಾತ್ರೆ ನಡೆದಿತ್ತು ಎಂಬ ಮಾಹಿತಿ ಹೇಳಲು ಹಳೆ ತಲೆಮಾರಿನ ಜನರು ಇಂದಿಲ್ಲ. ಸುಖ, ಶಾಂತಿ, ನೆಮ್ಮದಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಗ್ರಾಮದ ಹಿರಿಯರಿಗೆ ಯುವಕರು ಸಾಥ್ ನೀಡಿ ದೇವಿ ಜಾತ್ರೆ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ.
ಅದ್ಧೂರಿ ತಯಾರಿ: ರಾಜ್ಯದಲ್ಲೇ ಕೊಪ್ಪಳದ ಕಿನ್ನಾಳ ಗ್ರಾಮದ ಕಲೆ ಪ್ರಸಿದ್ಧಿ ಪಡೆದಿದ್ದು, ಆ ಕಲಾವಿದರಿಂದ ಹೊಸದಾಗಿ ಲಕ್ಷಾಂತರ ರು.ಗಳ ವೆಚ್ಚದಲ್ಲಿ ದೇವಿ ಮೂರ್ತಿಗಳು ಮತ್ತು ಸುಂದರ, ಆಕರ್ಷಕವಾಗಿ ಕೆತ್ತನೆಗೊಂಡಿವೆ.
ಮೇ 17ರಂದು ಗ್ರಾಮದ ದೇವಾನು ದೇವತೆಗಳಿಗೆ ದೀಪಾರಾಧನೆ ಪೂಜೆ ನಂತರ ಅಂಕಿ ಹಾಕುತ್ತಾರೆ. ಮೇ 18ರಂದು ಕೇಲು, ಮೇಟಿ ದೀಪ ಮತ್ತು ಪಂಚ ಕಳಸ ತರುತ್ತಾರೆ.19ರಂದು ದೇವಿಯ ಬಾಬುದಾರರಿಗೆ ಉಡಿ ತುಂಬುವುದು, 20ರಂದು ಜನಪದ ಕಲಾ ತಂಡದವರಿಂದ ರಕ್ತರಾತ್ರಿ ನಾಟಕ ಪ್ರದರ್ಶನ ನಡೆಯಲಿದೆ.
21ರಂದು ಶ್ರೀದೇವಿಗೆ ವಿಶ್ವಕರ್ಮ ಸಮಾಜದಿಂದ ದೃಷ್ಟಿ ಇಟ್ಟು, ಶಾನಭೋಗರ ಮನೆಯಿಂದ ನೈವೇದ್ಯ, ಗೌಡರ ಮನೆಯಿಂದ ಕಳಸದೀಪ ಸಂಜೆ 4 ಗಂಟೆಗೆ ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಚೌತಮನೆ ನಿರ್ಮಿಸಿ ಮೂರ್ತಿ ಸ್ಥಾಪನೆ ಮಾಡುತ್ತಾರೆ.
ಮೇ 22ರಂದು ಗಂಗಾವತಿ ಪ್ರಾಣೇಶರಿಂದ ಹಾಸ್ಯಸಂಜೆ ಕಾರ್ಯಕ್ರಮ, 23ರಂದು ಪೋತರಾಜರಿಂದ ಗಾವಗುರಿ ಜಿಗಿಯುವುದು. ದೊಡ್ಡಾಟ ಕಲಾವಿದ ಬಸವಂತಪ್ಪ ನೇತೃತ್ವದಲ್ಲಿ ಗ್ರಾಮ ದೇವತಾ ನಾಟ್ಯ ಸಂಘದವರಿಂದ ಮೂರುವರೆ ವಜ್ರ ದೊಡ್ಡಾಟ ಪ್ರದರ್ಶನವಾಗಲಿದೆ. 24ರಂದು ಗ್ರಾಪಂನಿಂದ ಉಡಿ ತುಂಬುವ ಕಾರ್ಯಕ್ರಮದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement