ಗಿಡ ನೆಟ್ಟು ಪರಿಸರ ಕಾಪಾಡಿ
ಕೊಟ್ಟೂರು: ವಾತಾವರಣವನ್ನು ಸದಾ ತಂಪಾಗಿರಿಸುವ ಕಾರಣಕ್ಕಾಗಿ ಸಾಮೂಹಿಕವಾಗಿ ಸಸಿಗಳನ್ನು ನೆಡುವ ಪ್ರಕ್ರಿಯೆಗೆ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆ ಮೂಲಕ ಪರಿಸರದ ವೈಪರೀತ್ಯಗಳನ್ನು ತಡೆಯಬಹುದು ಎಂದು ಕೂಡ್ಲಿಗಿ ತಹಸೀಲ್ದಾರ್ ಜವರೇಗೌಡ ಹೇಳಿದರು.
ಶನಿವಾರ ಇಲ್ಲಿನ ವಿದ್ಯಾನಗರ ಪ್ರದೇಶದಲ್ಲಿ ಜೆಸಿಐ ಕಾಟನ್ ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಜಂಟಿಯಾಗಿ ಏರ್ಪಡಿಸಿದ್ದ ಬೃಹತ್ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಕೃತಿಕ ವಿಕೋಪಗಳು ಪದೆ ಪದೇ ನಡೆಯುತ್ತಿವೆ. ಇದಕ್ಕೆಲ್ಲ ಪ್ರಕೃತಿಯಲ್ಲಿನ ಅಸಮತೋಲನ ಕಾರಣವಾಗಿದೆ. ಪ್ರಕೃತಿ ಸಂಪತ್ತನ್ನು ಹಾಳುಗೆಡವದೇ ಉಳಿಸಿ ಬೆಳೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಸಿರಿಬಿ ಕೊಟ್ರೇಶ್ ಮಾತನಾಡಿ, ಈ ಪ್ರದೇಶದಲ್ಲಿ 1200 ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮ ಹಾಕಿಕೊಂಡಿರುವುದು ಸ್ವಾಗತಾರ್ಹ. ಹಸಿರುಕರಣಗೊಳಿಸುವ ಈ ಪ್ರಕ್ರಿಯೆಯಲ್ಲಿ ತಾವು ನಿರಂತರ ತೊಡಗಿಸಿಕೊಂಡು ಪರಿಸರವನ್ನು ಅಂದವಾಗಿರಿಸಿಕೊಳ್ಳಲು ಗಮನಹರಿಸುವೆ. ಇದಕ್ಕೆ ಎಲ್ಲ ಬಗೆಯ ಸಹಕಾರವನ್ನು ನೀಡುವೆ ಎಂದು ತಿಳಿಸಿದರು.
ಜೆಸಿಐ ಸ್ಥಳೀಯ ಅಧ್ಯಕ್ಷ ಜಗದೀಶ್ಚಂದ್ರ ಬೋಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಜೆಸಿಐ ಕಾಟನ್ ಸಂಸ್ಥೆಯಿಂದ ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗುವುದು ಎಂದರು. ಪಪಂ ಮುಖ್ಯಾಧಿಕಾರಿ ಹನುಮಂತಮ್ಮ, ಪಪಂ ಮಾಜಿ ಅಧ್ಯಕ್ಷ ಕೂಟ್ರೇಶ್ ಕಾಮಶೆಟ್ಟಿ, ಅರಣ್ಯಾಧಿಕಾರಿ ಮಹೇಶ್, ಈಶ್ವರಪ್ಪ ತುರಕಾಣಿ, ವೆಂಕಟೇಶ್, ಕೊಟ್ರುಸ್ವಾಮಿ ಸಾರಂಗಮಠ, ಮನೋಹರ, ಸಿದ್ದೇಶ್ ಸಣ್ಣಗಿರಿ ಉಪಸ್ಥಿತರಿದ್ದರು. ಯೋಗೀಶ್ವರ ದಿನ್ನೆ ವಂದಿಸಿದರು.