ಉಪನ್ಯಾಸಕರ ಕಿರುಕುಳ: ರಕ್ತ ಸಹಿ ಸಂಗ್ರಹಿಸಿ ಧರಣಿ
ಹೂವಿನಹಡಗಲಿ: ಆಂತರಿಕ ಪರೀಕ್ಷೆಯ ಅಂಕಕ್ಕೆ ಅಕ್ರಮ ಹಣ ಸಂಗ್ರಹ, ವಿದ್ಯಾರ್ಥಿಗಳಲ್ಲಿ ತಾರತಮ್ಯ, ನಿತ್ಯ ಮಾನಸಿಕ ಕಿರುಕುಳ, ಬೆದರಿಕೆ, ನೂರಾರು ವಿದ್ಯಾರ್ಥಿ ಸಮ್ಮುಖದಲ್ಲೇ ತರಗತಿ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನವೀಯ ಘಟನೆಗಳಿಂದ ವಿಷವರ್ತುಲದಂತಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವಿಲವಿಲ ಒದ್ದಾಡುತ್ತಿದ್ದಾರೆ.
ಇಂತಹ ನೂರಾರು ಸಮಸ್ಯೆಗಳನ್ನು ಸುತ್ತಿಕೊಂಡಿರುವ ಹೂವಿನಹಡಗಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಹನೆಯ ಕಟ್ಟೆ ಒಡೆದು 62 ವಿದ್ಯಾರ್ಥಿಗಳು ರಕ್ತ ಸಹಿ ಸಂಗ್ರಹಿಸಿದ ಅಪರೂಪದ ಪ್ರತಿಭಟನೆ ಸೋಮವಾರ ನಡೆದಿದೆ.
ನೂರಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಜತೆಗೆ ಉಪನ್ಯಾಸಕರ ಕಿರುಕುಳ ಅನುಭವಿಸದೇ 6 ಸೆಮಿಸ್ಟರಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಆಗ ಎಂ.ಎಸ್. ರಾಜಶೇಖರ್ ಮತ್ತು ಅಫೋಜ್ ಖಾನ್ ಎಂಬ ಉಪನ್ಯಾಸಕರ ಬಂಡವಾಳ ಬಯಲಿಗೆ ಬಿದ್ದಿದೆ.
ಬೆದರಿಕೆ ಹಾಕುತ್ತಾರೆ: 6 ಸೆಮಿಸ್ಟರ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ 64 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ತಮ್ಮ ನೂರಾರು ಸಮಸ್ಯೆಗಳನ್ನು ಪ್ರಾಚಾರ್ಯರ ಮುಂದೆ ಹೇಳಿಕೊಂಡಾಗ, ಈವರೆಗೂ ತಮ್ಮ ಗಮನಕ್ಕೆ ಇಂತಹ ಸಮಸ್ಯೆಗಳು ಬಂದಿಲ್ಲ. ಈಗ ಎಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದೀರಿ ಎಂದಾಗ, ನಿಮ್ಮ ಮುಂದೆ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳಬೇಕೆಂದರೆ ನೀವು ಮುಂದೆ ಹೇಗೆ ಎಂಜಿನಿಯರಿಂಗ್ ಪಾಸ್ ಆಗ್ತಿರಿ ನೋಡುತ್ತೇವೆಂದು ಬೆದೆರಿಕೆ ಹಾಕುತ್ತಾರೆಂದು ವಿದ್ಯಾರ್ಥಿಗಳು ಉಪನ್ಯಾಸಕರ ವಿರುದ್ಧ ಗಂಭೀರವಾಗಿ ಆರೋಪಿಸಿದರು.
ಕಾಲೇಜಿನ ಪ್ರಾಚಾರ್ಯರ ಬಗ್ಗೆ ಯಾವುದೇ ದೂರಿಲ್ಲ, ಆದರೆ ಈ ಇಬ್ಬರು ಉಪನ್ಯಾಸಕರು ತಮಗೆ ಮಾನಸಿಕ ಕಿರುಕುಳ ನೀಡುತ್ತಾರೆ. ಆಂತರಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡುವ ಬೆದರಿಕೆ ಹಾಕುತ್ತಾರೆ. ಇಂತಹ ಭಯದ ವಾತಾವರಣದಲ್ಲಿ ನಾವು ಯಾವ ರೀತಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ? ನೀವೇ ಹೇಳಿ ಎಂದು ಪ್ರಶ್ನಿಸಿದರು.
ಅಂಕದಲ್ಲಿ ತಾರತಮ್ಯ: ಉಪನ್ಯಾಕರು ಶಿಕ್ಷೆ ಕೊಡಲಿ. ಆದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ತರಗತಿಯಲ್ಲಿ ಒಂಟಿಗಾಲಿನಲ್ಲಿ ನಿಲ್ಲಿಸುತ್ತಾರೆ. ಪ್ರತಿ ಸಾರಿ ನಡೆಯುವ ಪ್ರಾಯೋಗಿಕ ಪರೀಕ್ಷೆಗಳಿಗೆ ಹಣ ಕೇಳುತ್ತಾರೆ. ಎಂ.ಕೆ. ಶೋಭಾ, ಪಿ. ಶ್ವೇತಾ ಮತ್ತು ಕೆ. ಮಂಜುನಾಥ ಎಂಬುವವರಿಗೆ ಆಂತರಿಕ ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆಯನ್ನು ಅವರ ಮನೆಗೆ ನೀಡಿ, ಅಧಿಕ ಅಂಕಗಳನ್ನು ನೀಡಿದ್ದಾರೆಂದು ದೂರಿದರು.
ಬಸವರಾಜ ಗೋರಂಟಿ ಎಂಬ ವಿದ್ಯಾರ್ಥಿ ತಂದೆ ತೀರಿಕೊಂಡಾಗ, ತಂದೆಯ ಮರಣ ಪ್ರಮಾಣಪತ್ರ ಕೇಳಿ ಅಮಾನವೀಯತೆಯನ್ನು ವಿದ್ಯಾರ್ಥಿಗಳ ಮುಂದೆ ಪ್ರರ್ಶಿಸಿದ್ದಾರೆ. ಅಲ್ಲದೇ ಆ ವಿದ್ಯಾರ್ಥಿಗೆ ಆಂತರಿಕ ಪರೀಕ್ಷೆ ಬರೆಯಲು ಅನುಮತಿ ನೀಡಿಲ್ಲ. ಆದರೆ ಪಿ. ಶ್ವೇತಾ ಎಂಬಾಕೆ ತಮ್ಮ ಸಹೋದರಿ ಮದುವೆಗೆ ಹೋಗಿದ್ದರೂ ಆಂತರಿಕ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಇಂಥ ತಾರತಮ್ಯ ಯಾಕೆಂದು ಪ್ರಶ್ನಿಸಿದರು.
ಬಟ್ಟೆ ತೊಳೆಯಬೇಕು: ರಾಜಶೇಖರ, ಅಪ್ರೋಜ್ ಖಾನ್ ಇಬ್ಬರು ತಮ್ಮ ಮನೆ ಬಟ್ಟೆ ತೊಳೆಯಲು, ಅಡಿಗೆ ಮಾಡಲು, ಪಾತ್ರೆ ತೊಳೆಯಲು ಬರಬೇಕೆಂದು ಒತ್ತಡ ಹೇರುತ್ತಾರೆ. ಇವರ ಮನೆಯಲ್ಲಿ ಕೆಲಸಕ್ಕೆ ಹೋದವರಿಗೆ ಹೆಚ್ಚಿನ ಅಂಕ ನೀಡಿ ತರಗತಿಯಲ್ಲಿ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಕಾಲೇಜಿನ ಒಳಗೆ ಇದ್ದ ಆಂತರಿಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಹೊರಗಡೆ ತಂದು ಅಂಕ ತಾರತಮ್ಯ ಮಾಡುವುದನ್ನು ಪ್ರಾಚಾರ್ಯರ ಮುಂದೆ ಪ್ರರ್ಶಿಸಿದರು.
ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಾರೆಂದು ತಿಳಿದು ಇದರಿಂದ ತಪ್ಪಿಸಿಕೊಳ್ಳಲು ಉಪನ್ಯಾಸಕ ರಾಜಶೇಖರ ಅನಧಿಕೃತ ಗೈರಿನಲ್ಲಿ ಕಾಲೇಜು ಬಿಟ್ಟು ಪರಾರಿಯಾಗಿದ್ದಾರೆ. ಈ ಕೂಡಲೇ ಕಾಲೇಜಿನಿಂದ ಅವರನ್ನು ವರ್ಗಾವಣೆ ಮಾಡಬೇಕು. ಅವರು ಕಾಲೇಜಿಗೆ ಬಂದರೆ ತಾವು ತರಗತಿಗಳನ್ನು ಬಹಿಷ್ಕಾರ ಮಾಡುತ್ತೇವೆಂದು ವಿದ್ಯಾರ್ಥಿಗಳು ಬೆದರಿಕೆ ಹಾಕಿದರು.
ಈ ಕೂಡಲೇ ತಪ್ಪು ಮಾಡಿರುವ ಉಪನ್ಯಾಸಕರ ಮೇಲೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಉನ್ನತ ಶಿಕ್ಷಣ, ರಿಜಿಸ್ಟರ್ ಬೆಳಗಾವಿ ಇವರಿಗೆ ಪತ್ರ ಬರೆದು ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆಂದು ಪ್ರಾಚಾರ್ಯರು ಭರವಸೆ ನೀಡಿದರು. ಆದರೂ ವಿದ್ಯಾರ್ಥಿಗಳು ತಮ್ಮ ಪಟ್ಟು ಬಿಡದೇ ಈ ಕೂಡಲೇ ರಾಜಶೇಖರ ಅವರನ್ನು ಹಾಜರುಪಡಿಸುವಂತೆ ಒತ್ತಾಯಿಸುತ್ತಾ, ಸುಮಾರು 5 ತಾಸಿಗೂ ಹೆಚ್ಚು ಪ್ರತಿಭಟನೆ ನಡೆಸಿದರು. ಮನವಿ ಪತ್ರವನ್ನು ವಿದ್ಯಾರ್ಥಿಗಳ ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರಾಚಾರ್ಯ ಎನ್. ಚಿಕ್ಕಣ್ಣ ಅವರಿಗೆ ನೀಡಿದರು.