ಕೂಡ್ಲಿಗಿ ತಾಪಂ ಸ್ಥಾಯಿ ಸಮಿತಿಗೆ ನೇಮಕ
ಕೂಡ್ಲಿಗಿ: ಸೋಮವಾರ ನಡೆದ ಕೂಡ್ಲಿಗಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿ ರಚನೆಗೆ ಸಂಬಂಧಿಸಿದಂತೆ ಸದಸ್ಯರು ಚರ್ಚಿಸಿ ಸ್ಥಾಯಿ ಸಮಿತಿಗಳ ರಚನೆ ಸಂಪೂರ್ಣ ಅಧಿಕಾರವನ್ನು ತಾಪಂ ಅಧ್ಯಕ್ಷರಿಗೆ ನೀಡಿದರು. ತಾಪಂ ಅಧ್ಯಕ್ಷೆ ಜಿ. ಪ್ರಮೀಳಾ ಚಿದಾನಂದಗೌಡ ತಮ್ಮ ವಿವೇಚನೆಯನ್ನು ಬಳಸಿ ಸಾಮಾನ್ಯ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನಾಗಿ ಎನ್.ಪಿ. ಮಂಜುನಾಥ, ಸದಸ್ಯರನ್ನಾಗಿ ಕರಿಯಮ್ಮ, ಎಚ್. ಮಹೇಶ್, ಹಳ್ಳಿ ಹೊನ್ನೂರಮ್ಮ, ಚನ್ನಮ್ಮ, ಪುಷ್ಪಾವತಿ ಅವರನ್ನು ಆಯ್ಕೆ ಮಾಡಿದರು. ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿಗೆ ತಾಪಂ ಅಧ್ಯಕ್ಷೆ ಜಿ. ಪ್ರಮೀಳಾ ಚಿದಾನಂದಗೌಡ ಅಧ್ಯಕ್ಷೆ, ಸದಸ್ಯರಾಗಿ ಎನ್. ಮಲ್ಲಿಕಾರ್ಜುನ, ರೆಡ್ಡಿ ವನಜಾಕ್ಷಿ, ಆರ್. ಹೇಮಣ್ಣ, ಮಂಗಳಮ್ಮ, ರತ್ನಮ್ಮ ಆಯ್ಕೆಗೊಂಡರು. ಸಾಮಾಜಿಕ ನ್ಯಾಯ ಸಮಿತಿಗೆ ಅಧ್ಯಕ್ಷರಾಗಿ ಎಂ. ವಿಶಾಲಾಕ್ಷಿ ಆಯ್ಕೆಯಾದರು. ಸದಸ್ಯರಾಗಿ ಓಬಮ್ಮ, ಬಸವರಾಜ, ಎಚ್. ರಾಜಪ್ಪ, ಜಿ. ಮಲ್ಲಿಕಾರ್ಜುನ, ನರಸಿಂಹಪ್ಪ ಅವರನ್ನು ನೇಮಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.