ಪರಸ್ಪರ ಅರಿತು ಬಾಳಿ: ಪ್ರಭುಲಿಂಗ ದೇವರು
ಕಂಪ್ಲಿ: ನೂತನ ದಂಪತಿಗಳು ಸುಖ ದುಃಖಗಳನ್ನು ಸಮಾನವಾಗಿ ಹಂಚಿಕೊಂಡು, ಪರಸ್ಪರ ಅರಿತು ಬದುಕು ಸಾಗಿಸಬೇಕು ಎಂದು ಬೆಂಗಳೂರು ಸಿದ್ಧಾರೂಢ ಮಿಷನ್ನಿನ ಪ್ರಭುಲಿಂಗ ದೇವರು ಹೇಳಿದರು. ಕಂಪ್ಲಿ ಸಮೀಪದ ಮೆಟ್ರಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ಸ್ವಾಮಿಯ ಪೂಜಾ ಕಾರ್ಯಕ್ರಮ ಅಂಗವಾಗಿ ಪಾಂಡುರಂಗ ಭಜನಾ ಮಂಡಳಿ ಭಕ್ತರು ಸೋಮವಾರ ಹಮ್ಮಿಕೊಂಡಿದ್ದ 9 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ತಮಗೆ ಜನಿಸುವ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳನ್ನು ನೀಡಬೇಕು. ದಂಪತಿಗಳು ಆರ್ಥಿಕ ಸ್ವಾವಲಂಬನೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡ ಜೆ.ಎನ್. ಗಣೇಶ್ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರ ಆರ್ಥಿಕ ಹೊರೆ ಕಡಿಮೆ ಮಾಡುವ ಮೂಲಕ ಬಡವರನ್ನು ಸಾಲಬಾಧೆ ಯಿಂದ ದೂರ ಮಾಡುತ್ತವೆ. ಸಮುದಾಯದಲ್ಲಿ ಸಮಾನತೆ ಹಾಗೂ ಭಾವೈಕ್ಯ ಬೆಳೆಸುತ್ತವೆ ಎಂದರು. ನಂದೀಪುರ ಮಹೇಶ್ವರ ಸ್ವಾಮೀಜಿ, ಶಂಕರಲಿಂಗ ಸ್ವಾಮೀಜಿ, ಯೋಗಾನಂದ ಸ್ವಾಮೀಜಿ, ಎಂ. ಸುಧೀರ್, ಮಹಾದೇವತಾತ ಮಠದ ಎಚ್.ಎಂ. ವಿಶ್ವೇಶ್ವರಯ್ಯ ಸ್ವಾಮಿ, ಮರಿಲಿಂಗಪ್ಪ, ಜಡೆಪ್ಪ, ಶಂಕ್ರಪ್ಪ, ಹೊನ್ನಳ್ಳಿ ಗಂಗಾಧರ, ಗುರುವಪ್ಪ, ಮುಖ್ಯಗುರು ಮಲ್ಲಯ್ಯ, ಭಜನಾ ಮಂಡಳಿಯ ಗಂಗಪ್ಪ, ಫಕ್ಕೀರಪ್ಪ, ಚ್.ಜೆ. ವರಾಂ, ಡಿ.ಸಿ. ಈರಣ್ಣ, ಪೆನಕಲಪಾಟಿ ಹನುಮಂತರಾಯುಡು, ಕೆಂಚಪ್ಪ, ಗ್ರಾಪಂ ಅಧ್ಯಕ್ಷ ಮಾರೆಣ್ಣ, ಭೀಮಲಿಂಗಪ್ಪ, ಜೆ. ಪಂಪಾಪತಿ, ಜಗದೀಶ್, ಪಂಪಣ್ಣ, ಚಿದಾನಂದಪ್ಪ, ದೊಡ್ಡಬಸಪ್ಪ ಇದ್ದರು. ಮೆಟ್ರಿ ಈರಣ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜೀವನದಲ್ಲಿ ಜಿಗುಪ್ಸೆ: ದಂಪತಿ ಆತ್ಮಹತ್ಯೆ
ಹೊಸಪೇಟೆ: ಜೀವನದಲ್ಲಿ ಜಿಗುಪ್ಸೆಗೊಂಡು ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿನ ಪಟೇಲ್ ನಗರದಲ್ಲಿ ಸೋಮವಾರ ನಡೆದಿದೆ. ಮೃತರನ್ನು ನಗರದ ನಿವಾಸಿ ಮಹೇಶ್‌ಕುಮಾರ್ (32) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಈತನ ಪತ್ನಿ ರಾಘಮತಿ ಆಲಿಯಾಸ್ ನಾಗಮಣಿ (29) ಕಾಲುವೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೇ 18ರಂದು ರಾಘಮತಿ ಅವರು ಮನೆಯಿಂದ ಹೊರಗೆ ಹೋದವರು ಮನೆಗೆ ಹಿಂತುರುಗಿ ಬಂದಿಲ್ಲ. ಆಕೆ ಕಾಣಿಯಾಗಿದ್ದಾಳೆ ಎಂದು ರಾಘಮತಿ ತಂದೆ ದಾಸರ ಕೃಷ್ಣಪ್ಪ ನಗರ ಪೊಲೀಸ್ ಠಾಣೆಯಲ್ಲಿ ಮೇ 19ರಂದು ದೂರು ನೀಡಿದ್ದರು. ಹೆಂಡತಿ ಮನೆ ಬಿಟ್ಟು ಹೋದಾಕಿ ಇನ್ನೂ ಮನೆಗೆ ತಿರುಗಿ ಬಂದಿಲ್ಲ ಎಂದು ಜಿಗುಪ್ಸೆಗೊಂಡ ಮಹೇಶ್‌ಕುಮಾರ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಿಂದ ಹೊರಗೆ ಹೋದ ರಾಘಮತಿ ಅಲಿಯಾಸ್ ನಾಗಮಣಿ, ಮೇ 20ರಂದು ಬೆಳಗ್ಗೆ ಕಮಲಾಪುರದ ಎಚ್‌ಪಿ ಕಾಲುವೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾಳೆ. ಇವರಿಬ್ಬರಿಗೂ ವಿವಾಹವಾಗಿ 11 ವರ್ಷಗಳಾಗಿದ್ದವು, ಇವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾಳೆ. ಈ ಕುರಿತು ಬಳ್ಳಾರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.