ವಕೀಲ ವೃತ್ತಿಯ ಮೌಲ್ಯ ಕಾಪಾಡಿ
ಬಳ್ಳಾರಿ: ವಕೀಲ ವೃತ್ತಿಯಲ್ಲಿ ನೈತಿಕ ಮೌಲ್ಯ ಅಳವಡಿಸಿಕೊಳ್ಳಲು ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಹೇಳಿದರು.
ನಗರದ ವುಂಕಿ ಸಣ್ಣರುದ್ರಪ್ಪ ಕಾನೂನು ಕಾಲೇಜಿನ 2012-13ನೇ ಸಾಲಿನ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಕಾನೂನಿನ ಮೇಲೆ ಆಧಾರಿತವಾದ ನಮ್ಮ ಸಮಾಜದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ತಮ್ಮ ಸ್ಥಾನ, ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನ ವಹಿಸಬೇಕು ಎಂದರು.
ಮಾಜಿ ಸಂಸದ ಕೋಳೂರು ಬಸವನಗೌಡ ಮಾತನಾಡಿ, ಕಾನೂನುಗಳ ಆಳ ಅಧ್ಯಯನ ನಡೆಸಿ, ಅವುಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು ನಿಮ್ಮಿಂದ ಕಾನೂನು ಸೇವೆ ನಿರೀಕ್ಷಿಸುವ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೀ.ವಿ. ಸಂಘದ ಮಾಜಿ ಕಾರ್ಯದರ್ಶಿ ಅಲ್ಲಂ ದೊಡ್ಡಪ್ಪ, ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಗೌರವ ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ, ಸಹ ಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ, ಕೋಶಾಧಿಕಾರಿ ಸಂಗನಕಲ್ ಹಿಮವಂತರಾಜ್, ಕಾನೂನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಂ. ವಿಶ್ವನಾಥ್, ಸದಸ್ಯರಾದ ಎಚ್.ಡಿ. ಪಂಪಾರೆಡ್ಡಿ, ಕೆ.ಎಂ. ಮಂಜುನಾಥ ಇತರರಿದ್ದರು.
ಪ್ರಾಚಾರ್ಯ ಎನ್.ವಿ. ರಾಜಶೇಖರಪ್ಪ ಸ್ವಾಗತಿಸಿದರು. ಉಪನ್ಯಾಸಕಿ ಭಾರತಿ ವರದಿ ವಾಚಿಸಿದರು. ಡಾ. ಕೆ. ರಜನಿಕುಮಾರಿ ವಂದಿಸಿದರು.