ಸಂಸ್ಕಾರಗಳಿಗೆ ಮಹತ್ವದ ಸ್ಥಾನವಿದೆ
ಕೊಟ್ಟೂರು: ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲೂ ಧರ್ಮ ಪರಂಪರೆಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುತ್ತಿರುವ ಕಾರಣಕ್ಕಾಗಿ ವೀರಶೈವ ಧರ್ಮ ತನ್ನ ಜೇಷ್ಠತೆಯನ್ನು ಸದಾ ಉಳಿಸಿಕೊಂಡು ಬಂದಿದೆ ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಉಜ್ಜಿನಿ ಸದ್ಧರ್ಮ ಪೀಠದ ಯಾತ್ರಿ ನಿವಾಸದಲ್ಲಿ ಪೀಠದ ವತಿಯಿಂದ ಏರ್ಪಡಿಸಿದ್ದ 58 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬದುಕನ್ನು ಸುಂದರಗೊಳಿಸಿಕೊಳ್ಳುವ ಕ್ರಿಯೆ ವಿವಾಹವಾಗಿದೆ. ಇದನ್ನು ಆಡಂಬರ ಡಾಂಭಿಕತನಕ್ಕೆ ಬಳಸಿಕೊಳ್ಳದೇ ಸರಳ ರೀತಿಯಲ್ಲಿ ಆಚರಿಸಿಕೊಂಡರೆ ಮಹತ್ವ ಪಡೆದುಕೊಳ್ಳುತ್ತದೆ. ಈ ಕಾರಣಕ್ಕಾಗಿ ಮಠ ಮಂದಿರಗಳು ಆಯೋಜಿಸುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕೇವಲ ಬಡ ಮದ್ಯಮ ವರ್ಗದವರು ಮಾತ್ರ ಪಾಲ್ಗೊಳ್ಳದೇ ಉಳ್ಳವರು ಪಾಲ್ಗೊಂಡು ಇದರ ಶ್ರೇಷ್ಠತೆಯ ಪಾಲನ್ನು ದೊರಕಿಸಿಕೊಳ್ಳಬೇಕು ಎಂದರು.
ಅವಿಭಕ್ತ ಕುಟುಂಬಗಳು ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವುದು ನಿಜಕ್ಕೂ ದುರಂತ. ಜೀವನ ಶೈಲಿಯಲ್ಲಿ ಬದಲಾವಣೆ ಬಯಸುವ ಕಾರಣಕ್ಕಾಗಿ ಕುಟುಂಬಗಳು ಬೇರೆ ಬೇರೆಯಾಗುತ್ತಿರುವುದು ಸಲ್ಲದು. ಒಗ್ಗೂಡಿನ ಬಾಳಿನಿಂದ ಸಿಗುವ ಸುಖ, ನೆಮ್ಮದಿ ಒಂಟಿ ಬಾಳಿನಿಂದ ಖಂಡಿತಾ ಸಿಗಲಾರದು. ಎಲ್ಲ ಬಗೆಯ ಜೀವನ ಮೌಲ್ಯಗಳನ್ನು ಅವಿಭಕ್ತ ಕುಟುಂಬಗಳು ಕಲಿಸಿಕೊಡುತ್ತವೆ ಎಂದು ಅಭಿಪ್ರಾಯಪಟ್ಟರು.
ನೆಮ್ಮದಿ ಬದುಕು ಕಾಣಿ: ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿವಾಹ ಬಂಧನವೆಂಬಂತೆ ಭಾವಿಸಿಕೊಳ್ಳದೇ ಜೀವನ ಯೋಗವಾಗಿ ಪರಿಗಣಿಸಬೇಕು. ಪ್ರತಿಯೊಂದರಲ್ಲಿ ಕಷ್ಟ, ಸುಖ, ನೆಮ್ಮದಿ ಬಂದೇ ಬರುತ್ತೇ ಯಾವುದನ್ನು ಆರಿಸಿಕೊಂಡರೆ ಒಳ್ಳೆಯದು ಎಂಬ ವಿವೇಚನೆಗೆ ಒಳಗಾಗಿ ಆರಿಸಿಕೊಂಡು ನೆಮ್ಮದಿಯ ಬದುಕು ಕಾಣಬೇಕು ಎಂದರು.
ಭೂತಭುಜಂಗ ಮಠದ ಯೋಗಿರಾಜೇಂದ್ರ ಸ್ವಾಮೀಜಿ, ಮುಷ್ಟೂರಿನ ರುದ್ರಮುನಿ ಸ್ವಾಮೀಜಿ ಮಾತನಾಡಿದರು. ಎಂ.ಎಂ.ಜೆ. ಹರ್ಷವರ್ಧನ್, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಕೆ. ಮಂಜುನಾಥಗೌಡ, ಪೀಠದ ವ್ಯವಸ್ಥಾಪಕ ಲಿಂಗಶೆಟ್ಟಿ, ಆರ್.ಎಂ. ಗುರುಬಸವಸ್ವಾಮಿ, ಎ. ಮರುಳಸಿದ್ದಪ್ಪ, ಕಮ್ಮಾರ ರುದ್ರಪ್ಪ, ಎಂ.ಜಿ. ರುದ್ರಯ್ಯ, ಜವಳಿ ರಾಜಶೇಖರ, ಗಿರೀಶ್, ಬಣವಿಕಲ್ಲು ಎರ್ರಿಸ್ವಾಮಿ ಪಾಲ್ಗೊಂಡಿದ್ದರು. ಚಿತ್ರದುರ್ಗ ನಿರಂಜನಾರಾಧ್ಯ ಕಾರ್ಯಕ್ರಮ ನಿರೂಪಿಸಿದರು.