ಮರಳು ಅಕ್ರಮ ದಂಧೆ: ದೋಣಿ ನಾಶ
ಹೂವಿನಹಡಗಲಿ: ತುಂಗಭದ್ರಾ ನದಿ ತೀರದಲ್ಲಿ ನಿತ್ಯವೂ ಮರಳು ಅಕ್ರಮ ದಂಧೆ ಎಗ್ಗಿಲ್ಲದೇ ಸಾಗಿದ್ದು, ಅಕ್ರಮದ ಮೇಲೆ ಪೊಲೀಸರು ದಾಳಿ ಮಾಡಿ ಯಾಂತ್ರೀಕೃತ ದೋಣಿಯೊಂದನ್ನು ನಾಶಪಡಿಸಿದ್ದಾರೆ.
ಮಂಗಳವಾರ ನದಿ ತೀರದಲ್ಲಿನ ಅಕ್ರಮ ಮರಳು ದಂಧೆಕೊರರ ಅಡ್ಡೆಗಳ ಮೇಲೆ ಪೊಲೀಸ್ ಇಲಾಖೆ ದಾಳಿ ಮಾಡಿದೆ. ತಾಲೂಕಿನ ನಂದಿಗಾವಿ ಬಳಿ ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದವರು, ಗಳಗನಾಥ-ನಂದಿಗಾವಿ ಗ್ರಾಮಗಳ ಮಧ್ಯೆ ಅಕ್ರಮವಾಗಿ ಯಾಂತ್ರೀಕೃತ ದೋಣಿಯಿಂದ ಅಕ್ರಮವಾಗಿ ಮರಳು ಎತ್ತುತ್ತಿದ್ದರು. ಅಕ್ರಮವನ್ನು ತಡೆಯಲು ಪೊಲೀಸರು ದಾಳಿ ಮಾಡಿದಾಗ ಯಾಂತ್ರೀಕೃತ ದೋಣಿಯಲ್ಲಿದ್ದವರು ಪರಾರಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಯಾಂತ್ರೀಕೃತ ದೋಣಿ ಯಾರಿಗೆ ಸೇರಿದ್ದು ಎಂದು ತಿಳಿದು ಬಂದಿರದ ಕಾರಣ, ದೋಣಿಗೆ ಜೋಡಣೆ ಮಾಡಲಾಗಿದ್ದ ಮಷಿನ್ನಲ್ಲಿ ಸಕ್ಕರೆ ಹಾಕಿ ನಾಶ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಹಿರೇಹಡಗಲಿ ಪಿಎಸ್ಐ ಮಹೇಂದ್ರಕುಮಾರ ನಾಯ್ಕ, ತಾಲೂಕಿನ ನಂದಿಗಾವಿ ಬಳಿ ಹಾವೇರಿ ಜಿಲ್ಲೆಯವರು ಅಕ್ರಮವಾಗಿ ಮರಳು ದಂಧೆಯಲ್ಲಿ ತೊಡಗಿದ್ದರು, ಆ ಸಂದರ್ಭಧಲ್ಲಿ ದಾಳಿ ಮಾಡಿದ್ದು, ಇದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಓಡಿ ಹೋಗಿದ್ದಾರೆ. ಆದರೆ ಈವರೆಗೂ ಈ ಯಾಂತ್ರೀಕೃತ ದೋಣಿ ಯಾರಿಗೆ ಸೇರಿದ್ದು ಎಂಬುದು ತಿಳಿದು ಬಂದಿಲ್ಲ ಎಂದು ತಿಳಿಸಿದರು.
ಮೀರಿನಿಂತ ದಂಧೆಕೋರರು: ಮರಳು ಅಕ್ರಮ ದಂಧೆಯ ಮೇಲೆ ಸಾಕಷ್ಟು ಬಾರಿ ಅಧಿಕಾರಿಗಳು ದಾಳಿ ಮಾಡಿದ್ದರೂ, ದಂಧೆಕೋರರು ಮಾತ್ರ ಹಗಲು ರಾತ್ರಿ ಎನ್ನದೇ ಅಧಿಕಾರಿಗಳ ಕಣ್ಣು ತಪ್ಪಿಸಿ ಮರಳು ಸಾಗಾಟ ಮತ್ತು ನದಿ ತೀರದಲ್ಲಿ ರಾತ್ರೋ ರಾತ್ರಿ ಮರಳು ಎತ್ತುವ ದಂಧೆ ಮಾಡುತ್ತಿದ್ದಾರೆ. ದಾಳಿಯಲ್ಲಿ ಅದೆಷ್ಟೋ ಆರೋಪಿಗಳು ಸಿಕ್ಕಿ ಬಿದ್ದರೂ ಆ ಆರೋಪಿಗಳಿಗೆ ಕಠಿಣ ಶಿಕ್ಷೆ ಇಲ್ಲದೇ, ಅಲ್ಪಸ್ವಲ್ಪ ದಂಡ ವಸೂಲಿ ಮಾಡಿ ಕೈ ತೊಳೆದು ಕೊಳ್ಳುವ ಸಂಪ್ರದಾಯ ತಾಲೂಕಿನಲ್ಲಿದೆ. ಆದರಿಂದಲೇ ಈ ಮರಳು ಅಕ್ರಮ ದಂಧೆ ಯಾವುದೇ ಭೀತಿ ಇಲ್ಲದೇ ಲೂಟಿ ಮಾಡುತ್ತಿದ್ದಾರೆಂದು ಸಾರ್ವಜನಿಕರು ದೂರುತ್ತಿದ್ದಾರೆ.