ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 21
ದೇವದಾಸಿಯರ ಮತ್ತು ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿತು.
ಈ ವೇಳೆ ಸತ್ಯಾಗ್ರಹ ನೇತೃತ್ವ ವಹಿಸಿದ್ದ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕೆ. ನಾಗರತ್ನಮ್ಮ ಮಾತನಾಡಿ, ಅನಾದಿ ಕಾಲದಿಂದಲೂ ಜಾರಿಯಲ್ಲಿರುವ ದೇವದಾಸಿ ಪದ್ಧತಿಯನ್ನು ತೊಲಗಿಸಬೇಕು. ಈ ಅನಿಷ್ಟ ಪದ್ಧತಿಗೆ ದೂಡುತ್ತಿರುವ ಅಮಾಯಕ ಬಾಲಕಿಯರನ್ನು ರಕ್ಷಿಸಬೇಕು. ಬಾಲ ಕಾರ್ಮಿಕ ಪದ್ಧತಿ, ಜೀತದಾಳು ಪದ್ಧತಿಗಳನ್ನು ನಿರ್ಮೂಲನೆ ಮಾಡಬೇಕು. ದಲಿತ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
10 ಸೆಂಟ್ಸ್ ನಿವೇಶನ ನೀಡಿ: ಆರ್ಥಿಕವಾಗಿ ತೀರಾ ಹಿಂದುಳಿದ ದೇವದಾಸಿಯರಿಗೆ ಮಾಸಿಕ ಸಹಾಯಧನವನ್ನು ರು. 1500ಕ್ಕೆ ಹೆಚ್ಚಿಸಬೇಕು. ದಲಿತರ ಜನಸಂಖ್ಯೆಗನುಗುಣವಾಗಿ ಕೇಂದ್ರ, ರಾಜ್ಯ ಮಂಡಿಸುವ ವಾರ್ಷಿಕ ಬಜೆಟ್ಗಳಲ್ಲಿ ಅನುದಾನ ಹೆಚ್ಚಳ ಮಾಡಬೇಕು. ದೇವದಾಸಿಯರಿಗೆ ಪುನರ್ ವಸತಿ ಕಲ್ಪಿಸಬೇಕು ಎಂದರು.
ವಸತಿಗಾಗಿ ಕನಿಷ್ಠ 10 ಸೆಂಟ್ಸ್ ನಿವೇಶನ ನೀಡಬೇಕು. ಅವರಿಗಾಗಿ ರು. 2 ಲಕ್ಷ ವೆಚ್ಚದ ಮನೆ ನಿರ್ಮಿಸಿಕೊಡಬೇಕು. ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳಿಂದ ಉಪ ಕಸುಬು ವ್ಯವಸ್ಥೆ ಕಲ್ಪಿಸಬೇಕು. ದೇವದಾಸಿಯರಿಗೆ ಮತ್ತು ದಲಿತರಿಗೆ ನೀಡಿದ ಸಾಲವನ್ನು ಬರದ ಹಿನ್ನೆಲೆಯಲ್ಲಿ ಮನ್ನಾ ಮಾಡಬೇಕು. ದಲಿತ ಕುಟುಂಬಗಳಿಗೆ ಅಂತ್ಯೋದಯ (ಬಿಪಿಎಲ್) ಕಾರ್ಡ್ ವಿತರಿಸಬೇಕು. ಮಾಸಿಕ 35 ಕೆ.ಜಿ. ಅಕ್ಕಿ, 4 ಕೆ.ಜಿ. ಸಕ್ಕರೆ, ಬೇಳೆ, ಎಣ್ಣೆ ಒದಗಿಸಬೇಕು. ಇನ್ನುಳಿದ ಅಗತ್ಯ ವಸ್ತುಗಳನ್ನು ಅರ್ಧ ಬೆಲೆಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದರು.
2 ಎಕರೆ ಜಮೀನು ನೀಡಿ: ಕೃಷಿ ಯೋಗ್ಯ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡುವುದನ್ನು ನಿಲ್ಲಿಸಬೇಕು. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ-2012 ಕೈಬಿಡಬೇಕು. ದೇವದಾಸಿ ಕುಟುಂಬಗಳಿಗೆ ಕನಿಷ್ಠ 2 ಎಕರೆ ಜಮೀನು ನೀಡಬೇಕು. ಪಡಿತರ ವ್ಯವಸ್ಥೆಯಲ್ಲಿ ನಗದು ವರ್ಗಾವಣೆ ಜಾರಿಗೆ ತರಬಾರದು. 5 ವರ್ಷಗಳ ಬಡ್ಡಿ ರಹಿತ ಸಾಲ ಯೋಜನೆಯಡಿ ಸಾಲ ನೀಡಬೇಕು. ಜಾತಿ ವ್ಯವಸ್ಥೆಯನ್ನು ನಿಯಂತ್ರಿಸಲು ಕಾಯಿದೆಯನ್ನು ಬಲಪಡಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಡಿ. ಅಡಿವೆಪ್ಪ, ಖಜಾಂಚಿ ವಿಶ್ವನಾಥ ಸ್ವಾಮಿ, ಎಸ್. ಯಲ್ಲಮ್ಮ, ಕೆ. ವೆಂಕಮ್ಮ, ಮಾರೆಮ್ಮ ಸೇರಿದಂತೆ ಜಿಲ್ಲೆಯ 7 ತಾಲೂಕುಗಳ ದೇವದಾಸಿ ಮತ್ತು ದಲಿತ ಮಹಿಳೆಯರು ಪಾಲ್ಗೊಂಡಿದ್ದರು.