ಇಂದಿನಿಂದ ಪ್ರಕೃತಿ ಚಿಕಿತ್ಸಾ ಶಿಬಿರ
ಹೊಸಪೇಟೆ: ತುಮಕೂರಿನ ಮಂಜುನಾಥೇಶ್ವರ ಯೋಗ ಪ್ರತಿಷ್ಠಾನ, ಹೊಸಪೇಟೆಯ ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ಉಚಿತ ಸರಳ, ಸಮೃದ್ಧ, ಸಹಜ ಪ್ರಾಣಾಯಾಮ, ಮುದ್ರಾ ಪ್ರಕೃತಿ ಚಿಕಿತ್ಸಾ ಶಿಬಿರ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಮೇ 23ರಿಂದ 27ರ ವರೆಗೆ ನಡೆಯಲಿದೆ.
ಪ್ರತಿದಿನ ಬೆಳಗ್ಗೆ 6ರಿಂದ 7ರವರೆಗೆ ಮತ್ತು ಸಂಜೆ 5.30ರಿಂದ 6.30 ರವರೆಗೆ ಶಿಬಿರ ನಡೆಯಲಿದೆ. ಮಧುಮೇಹ, ರಕ್ತದೊತ್ತಡ, ಥೈರಾಯಿಡ್, ದೇಹತೂಕ ಹೆಚ್ಚಾಗಿರುವುದು, ಕಡಿಮೆ ಇರುವುದು, ಮಾನಸಿಕ ಖಿನ್ನತೆ, ನಿದ್ರಾ ಹೀನತೆ, ಬೆನ್ನು ನೋವು, ಹಿಮ್ಮಡಿ ನೋವು, ಸ್ಪಾಂಡಿಲೈಟಿಸ್, ಅಸ್ತಮಾ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಮಲಬದ್ದತೆ, ಜೀರ್ಣಶಕ್ತಿ ಕೊರತೆ ಸೇರಿದಂತೆ ಇತರೆ ತೊಂದರೆ ಉಳ್ಳವರಿಗಾಗಿ ಶಿಬಿರದಲ್ಲಿ ವಿಶೇಷ ಮುದ್ರೆ ಅಕ್ಯುಪ್ರೆಶರ್ ಬಿಂದು ಮತ್ತು ಯೋಗ ಚಿಕಿತ್ಸೆ ಮೂಲಕ ತರಬೇತಿ ನೀಡಲಾಗುವುದು. ಅಂತಾರಾಷ್ಟ್ರೀಯ ಯೋಗ ಪ್ರಶಸ್ತಿ ವಿಜೇತ ಮಂಜುನಾಥ ಮತ್ತು ತಂಡ ತರಬೇತಿ ನೀಡಲಿದೆ.
ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಶಿಬಿರದ ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.
ರಕ್ತದಾನ ಶಿಬಿರ
ಬಳ್ಳಾರಿ: ಭಾರತೀಯ ರೆಡ್ಕ್ರಾಸ್ ಸಂಸ್ಥೆ, ವಿಮ್ಸ್, ಸೆಂಟರ್ ಫಾರ್ ರೂರಲ್ ಡೆವೆಲಪ್ಮೆಂಟ್, ಜ್ಞಾನಜ್ಯೋತಿ ಎಂಎಸ್ಡಬ್ಲೂ ಕಾಲೇಜು, ಹಂದ್ಯಾಳ್ನ ಶ್ರೀ ಮಹದೇವತಾ ಕಲಾ ಸಂಘ ಹಾಗೂ ಸ್ಪಂದನ ಚಾರಿಟೇಬಲ್ ಟ್ರಸ್ಟ್ಗಳ ಸಹಯೋಗದಲ್ಲಿ ತಾಲ್ಲೂಕಿನ ಹಂದ್ಯಾಳ್ ಗ್ರಾಮದಲ್ಲಿ ಭಾನುವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಖಜಾಂಚಿ ಪೋಲಾ ರಾಧಾಕೃಷ್ಣ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ನಗರದ ವಿಮ್ಸ್ ರಕ್ತ ಭಂಡಾರದ ಸಿಬ್ಬಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಗೃಹರಕ್ಷಕದಳದ ಕಮಾಂಡೆಂಟ್ ಶಕೀಬ್, ಡಿ. ದೇವಣ್ಣ, ಹುಸೇನ್ ಸಾಬ್, ಪ್ರಕಾಶ್ ಜೈನ್, ಸಂದೀಪ್ ಶರ್ಮ, ಸಂಸ್ಥೆಯ ಕಾರ್ಯದರ್ಶಿ ಡಾ. ಕೆ. ನಾಗರಾಜ್ ರಾವ್, ಬಿ.ಡಿ. ಗೌಡ ಮತ್ತಿತರರು ಉಪಸ್ಥಿತರಿದ್ದರು. ಮಂಜುನಾಥಸ್ವಾಮಿ ನಿರೂಪಿಸಿದರು.