ಕ್ರೈಸ್ತ ಮಿಷನರಿಗಳಿಂದ ಮತಾಂತರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 22
ಕ್ರಿಶ್ಚಿಯನ್ ಮಿಷನರಿಗಳಿಂದ ಆಂಧ್ರಪ್ರದೇಶದಲ್ಲಿ ಭಾರಿ ಮತಾಂತರ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆ ಹಾಗೂ ರಾಜ್ಯದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ರಾಘವ ರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದ 23 ಜಿಲ್ಲೆಗಳ ಪೈಕಿ 9ರಲ್ಲಿ ಮತಾಂತರ ಜೋರಾಗಿ ನಡೆದಿದೆ. ಕೆಳ ಮತ್ತು ಮೇಲ್ವರ್ಗದ ಸುಶಿಕ್ಷಿತ ಜನರನ್ನು ಕೇಂದ್ರಿಕರಿಸಲಾಗಿದೆ. ಇದನ್ನು ತಡೆಗಟ್ಟಲು ವಿಶ್ವಹಿಂದೂ ಪರಿಷತ್ ಬಲಿಷ್ಠ ಯೋಜನೆ ರೂಪಿಸಿದೆ ಎಂದರು.
ವಿಶ್ವಹಿಂದು ಪರಿಷತ್ನ್ನು 1964ರಲ್ಲಿ ಸ್ಥಾಪಿಸಲಾಗಿದ್ದು, 2014ಕ್ಕೆ 50ವರ್ಷ ಪೂರೈಸಲಿದೆ. ಈ ಹಿನ್ನೆಲೆ ರಾಷ್ಟ್ರಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರಿಷತ್ ಕಚೇರಿ ತೆರೆಯುವ ಮೂಲಕ ಮತಾಂತರ ತಡೆಯಲಾಗುವುದು. ದಕ್ಷಿಣ ಭಾರತದಲ್ಲಿ ಪರಿಷತ್ನ್ನು ಬಲಿಷ್ಠಗೊಳಿಸುವ ಉದ್ದೇಶವಿದೆ ಎಂದು ರೆಡ್ಡಿ ತಿಳಿಸಿದರು.
ವಿದೇಶಗಳಿಂದ ದೇಶದ ಕ್ರಿಶ್ಚಿಯನ್ ಮಿಷನರಿಗಳಿಗೆ ವಾರ್ಷಿಕ ರು. 40 ಸಾವಿರ ಕೋಟಿ ದೇಣಿಗೆ ಹರಿದುಬರುತ್ತಿದೆ. ಈ ಪೈಕಿ ಶೇ. 75ರಷ್ಟನ್ನು ಮತಾಂತರ, ಮಿಷನರಿಗಳ ಸ್ಥಾಪನೆಗೆ ಬಳಸಲಾಗುತ್ತಿದೆ. ಗ್ರಾಮಗಳಲ್ಲಿ ದೇವಸ್ಥಾನಗಳಲ್ಲಿ ಕರೆದುಕೊಳ್ಳದ ಜನರನ್ನು ಇವರು ಚರ್ಚ್ಗಳಲ್ಲಿ ಮೊದಲ ಸಾಲಿನಲ್ಲಿ ಕೂರಿಸುತ್ತಾರೆ. ಪರಿಶಿಷ್ಟ ಜನಾಂಗದಲ್ಲಿನ ವಿದ್ಯಾವಂತರನ್ನು ಹುಡುಕಿ ಹಣದ ಆಸೆ ತೋರಿಸುತ್ತಾರೆ. ಅಥವಾ ಅವರನ್ನು ಫಾದರ್ ಆಗಿ ನೇಮಿಸಿ, ಜನಾಂಗವನ್ನು ಮತಾಂತರ ಮಾಡುತ್ತಾರೆ. ಉದ್ಯೋಗ ಕಲ್ಪಿಸುವ ನೆಪದಲ್ಲಿ ಆಟೋ ನೀಡಿ, ರು. 1000 ವಸೂಲಿ ಮಾಡುತ್ತಾರೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಮನಹರಿಸುವ ಅಗತ್ಯವಿದೆ ಎಂದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಬಿಜೆಪಿ ಸರ್ಕಾರ ಸದನದಲ್ಲಿ ಅಂಗೀಕರಿಸಿತ್ತು. ಆದರೆ, ಬಿಜೆಪಿಯ ಆಂತರಿಕ ಕಚ್ಚಾಟದಿಂದ ಅದು ನೆನೆಗುದಿಗೆ ಬಿತ್ತು. ಈಗ ಸಿಎಂ ಸಿದ್ದರಾಮಯ್ಯ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳುವ ಮೂಲಕ ಅಲ್ಪಸಂಖ್ಯಾತ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ. ಗೋಹತ್ಯೆ ನಿಷೇಧ ರಾಷ್ಟ್ರಮಟ್ಟದಲ್ಲಿ ಆಗಬೇಕು ಎಂದು ಒತ್ತಾಯಿಸಿದರು.