ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದುಂದುವೆಚ್ಚದ ಮದುವೆಗೆ ಕಡಿವಾಣ ಹಾಕಿ: ಸಲಹೆ

Rashmi Kasaragodu
Updated On : 23 May 2013, 12:01 pm

ಹೊಸಪೇಟೆ: ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸುವ ಮೂಲಕ ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಬುಧವಾರ ನಡೆದ ಗುರುಪಾದದೇವರ ಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ 45ನೇ ಪುಣ್ಯಸ್ಮರಣೆ ಹಾಗೂ 2ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವ ಮೂಲಕ ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಮದುವೆಗಾಗಿ ಮಾಡುವ ಖರ್ಚನ್ನು ಮಕ್ಕಳ ಭವಿಷ್ಯದ ವಿದ್ಯಾಭ್ಯಾಸಕ್ಕೆ ಮೀಸಲಿಡುವುದು ಒಳಿತಾಗಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ದಂಪತಿಗಳಿಗೆ ಸರ್ಕಾರ ವಿಶೇಷ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ತಿಳಿಸಿದರು.
ಉತ್ತಮ ಜೀವನ ನಡೆಸಿ: ಮುಂಡರಗಿ ಸಂಸ್ಥಾನ ಮಠದ ನಾಡೋಜ ಅನ್ನದಾನೇಶ್ವರ ಮಹಾಸ್ವಾಮೀಜಿ ಮಾತನಾಡಿ, ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮನುಷ್ಯ ಅನೇಕ ಒತ್ತಡಗಳಲ್ಲಿ ಜೀವನ ಸಾಗಿಸುವ ವಾತಾವರಣ ನಿರ್ಮಾಣವಾಗಿದೆ. ಮನುಷ್ಯ ಎಷ್ಟೇ ಸಂಪತ್ತು ಗಳಿಸಿದರೂ ಗಳಿಸಿದ ಸಂಪತ್ತನ್ನೆಲ್ಲಾ ಭೂಮಿ ಮೇಲೆ ಬಿಟ್ಟು ಹೋಗಬೇಕಾಗಿದೆ. ಸಾಯುವಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ. ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವುದಕ್ಕೆ ಅಷ್ಟೊಂದು ವ್ಯಾಮೋಹ ಪಡುವುದು ಸರಿಯಲ್ಲ. ಮನುಷ್ಯ ಮಾನವೀಯತೆಯಿಂದ ಮತ್ತು ಆಧ್ಯಾತ್ಮಿಕಕತೆಯಿಂದ ಜೀವನ ಸಾಗಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕಂಪ್ಲಿ ಕಲ್ಮಠದ ಪ್ರಭುಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ಸ್ವಾಭಿಮಾನದಿಂದ ಜೀವನ ಸಾಗಿಸುವ ಮೂಲಕ ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಮುಂದಾಗಬೇಕು ಎಂದರು. ಮರಿಯಮ್ಮನಹಳ್ಳಿಯ ಕಣಿವಬರಸಾಪುರದ ಅರಳಿಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಸಮಾರಂಭದ ಅಧ್ಯಕ್ಷತೆ ವಹಿಸಿ, ಆಶೀರ್ವಚನ ನೀಡಿದರು.
ಕೊಟ್ಟೂರಿನ ಶಂಕರ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಮಾನಿಹಳ್ಳಿಯ ಮಳಿ ಯೋಗೀಶ್ವರ ಶಿವಾಚಾರ್ಯರು, ನಂದಿಪುರದ ಮಹೇಶ್ವರ ಸ್ವಾಮೀಜಿ, ಮಹಾರಾಷ್ಟ್ರ ನಾಂದೇಡದ ರುದ್ರಪಶುಪತಿ ಶಿವಾಚಾರ್ಯರು, ಬೆಣ್ಣಿಹಳ್ಳಿಯ ಪಂಚಾಕ್ಷರಿ ಶಿವಾಚಾರ್ಯರು, ಜಿಪಂ ಸದಸ್ಯ ಅನ್ನದಾನ ರೆಡ್ಡಿ, ಹುಬ್ಬಳ್ಳಿ ಪಾಂಡುರಂಗ ಶೆಟ್ಟಿ, ಚಿದ್ರಿ ಸತೀಶ್, ಡಾ.ಕೆ. ನಾಗರತ್ನಮ್ಮ, ಕೆ. ಶಿವಮೂರ್ತಿ, ವಸ್ತ್ರದ್ ವೀರಭದ್ರಯ್ಯ, ಶಿವಶಂಕರಯ್ಯ, ವೈ.ಎಸ್. ಮಲ್ಲಿಕಾರ್ಜುನ, ಚನ್ನನಗೌಡ, ಹಿರೇಹಡಗಲಿಯ ಎಚ್. ಎಂ. ಕೊಟ್ರಯ್ಯ  ಸೇರಿದಂತೆ ಇತರರು ಭಾಗವಹಿಸಿದ್ದರು. 19 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement