ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರು. 10,889 ಕೋಟಿ ಮೀರಿದ ಪಿಜಿ ಬ್ಯಾಂಕ್ ವ್ಯವಹಾರ

Rashmi Kasaragodu
Updated On : 23 May 2013, 12:01 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 22
ಪ್ರಗತಿ ಗ್ರಾಮೀಣ ಬ್ಯಾಂಕ್ನ ಒಟ್ಟು ವ್ಯವಹಾರ ರು. 10,889 ಕೋಟಿ ಮೀರಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಎಂ.ಜಿ. ಭಟ್ ತಿಳಿಸಿದರು.
ನಗರದ ಪ್ರಗತಿ ಗ್ರಾಮೀಣ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ನ ರು. 10,889 ಕೋಟಿ ವ್ಯವಹಾರ ಗಣನೀಯ ಸಾಧನೆಯಾಗಿದೆ. ಕಳೆದ ವರ್ಷ ನಿವ್ವಳ ಲಾಭ ರು. 62.41 ಕೋಟಿಗಳಾಗಿದ್ದು, 2011-12ನೇ ಸಾಲಿನಲ್ಲಿ ರು. 12.61 ಕೋಟಿ ನಿವ್ವಳ ಲಾಭವನ್ನು ಬ್ಯಾಂಕ್ ಗಳಿಸಿತ್ತು. ಈ ವರ್ಷ ನಿವ್ವಳ ಲಾಭ ಐದು ಪಟ್ಟು ವೃದ್ಧಿಯಾಗಿದೆ ಎಂದರು.
45,682 ಕಿಸಾನ್ ಕ್ರೆಡಿಟ್ ಕಾರ್ಡ್: ಬ್ಯಾಂಕ್ನ ಒಟ್ಟಾರೆ ಠೇವಣಿ ರು. 5,231 ಕೋಟಿಗಳಿಗೆ ಏರಿದ್ದು, ಶೇ. 14.31ರಷ್ಟು ಉತ್ತಮ ಬೆಳವಣಿಗೆ ಕಂಡಿದೆ. ಚಾಲ್ತಿ ಮತ್ತು ಉಳಿತಾಯ ಖಾತೆಗಳ ಠೇವಣಿ ರು. 2,467 ಕೋಟಿಗಳಾಗಿದ್ದು, ಶೇ. 25.21ರಷ್ಟು ವೃದ್ಧಿಯಾಗಿದೆ. ಒಟ್ಟಾರೆ ಠೇವಣಿಯಲ್ಲಿ ಚಾಲ್ತಿ ಮತ್ತು ಉಳಿತಾಯ ಖಾತೆಗಳ ಪಾಲು ಶೇ. 43.38ರಷ್ಟಿದೆ. ಜಿಲ್ಲಾ ವಾರ್ಷಿಕ ಸಾಲ ಕ್ರಿಯಾಯೋಜನೆಯಡಿ ನಿಗದಿಪಡಿಸಿದ ಗುರಿಯನ್ನು ಮೀರಿ 121.80ರಷ್ಟು ಮುಂಗಡ ವಿತರಣೆ ದಾಖಲಿಸಿ ಮಾರ್ಚ್ 31ಕ್ಕೆ ಮುಂಗಡ ಮತ್ತು ಠೇವಣಿ ಅನುಪಾತ ಶೇ. 63.38ರಷ್ಟಾಗಿದೆ. 2012-13ನೇ ಸಾಲಿನಲ್ಲಿ 45,682 ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ವಿವರಿಸಿದರು.
ರಾಷ್ಟ್ರೀಯ ದಾಖಲೆ: 218 ನೂತನ ಗ್ರಾಮೀಣ ಕೃಷಿ ಗೋದಾಮುಗಳಿಗಾಗಿ ರು. 11.48 ಕೋಟಿ ಮುಂಗಡ ವಿತರಣೆ ಆಗಿದ್ದು, ಬ್ಯಾಂಕ್ನಿಂದ ಹಣಕಾಸು ನೆರವು ಪಡೆದು ನಿರ್ಮಿಸಿದ ಇಂತಹ ಗೋದಾಮುಗಳ ಸಂಖ್ಯೆ 1,806ಕ್ಕೆ ಏರಿದೆ. ಇದು ರಾಷ್ಟ್ರೀಯ ದಾಖಲೆಯೂ ಆಗಿದೆ. ಮಾರ್ಚ್ 2012ರ ಅಂತ್ಯಕ್ಕೆ ಇದ್ದ ರು. 450 ಕೋಟಿಗಳ ಅನುತ್ಪಾದಕ ಆಸ್ತಿಯನ್ನು ಮಾರ್ಚ್ 2013ರಲ್ಲಿ ರು. 172 ಕೋಟಿಗೆ ಇಳಿಕೆ ಮಾಡಲಾಗಿದೆ ಎಂದು ಬ್ಯಾಂಕ್ನ ವಾರ್ಷಿಕ ಸಾಧನೆ ವಿವರಿಸಿದರು.
38 ಲಕ್ಷ ಗ್ರಾಹಕರು: ಪ್ರಗತಿ ಗ್ರಾಮೀಣ ಬ್ಯಾಂಕ್ ರಾಜ್ಯದ ಎಂಟು ಜಿಲ್ಲೆಗಳಲ್ಲಿ 434 ಶಾಖೆ ಹೊಂದಿದ್ದು, ಆರ್ಥಿಕ ಸೇರ್ಪಡೆ ಅನುಷ್ಠಾನದಲ್ಲಿ ರಾಜ್ಯದ ಗ್ರಾಮೀಣ ಬ್ಯಾಂಕ್ಗಳಲ್ಲೇ ಅಗ್ರಸ್ಥಾನ ಪಡೆದಿದೆ. 32 ಲಕ್ಷ ಠೇವಣಿ ಗ್ರಾಹಕರು ಹಾಗೂ 6 ಲಕ್ಷ ಸಾಲದ ಗ್ರಾಹಕರು ಸೇರಿ 38 ಲಕ್ಷ ಗ್ರಾಹಕರನ್ನು ಹೊಂದಿದೆ. ರಾಜ್ಯದ ನಾಲ್ಕು ಗ್ರಾಮೀಣ ಬ್ಯಾಂಕ್ಗಳಾದ ತುಂಗಭದ್ರಾ, ಕೋಲಾರ, ಚಿತ್ರದುರ್ಗ ಹಾಗೂ ಸಹ್ಯಾದ್ರಿ ಗ್ರಾಮೀಣ ಬ್ಯಾಂಕ್ಗಳನ್ನು ಒಗ್ಗೂಡಿಸಿ 2005ರಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಉದಯವಾಗಿತ್ತು. ರಾಜ್ಯದ 434 ಶಾಖೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಕುಂಸಿ ಬಾಬು, ಬಿ.ಜಿ. ಕುಲಕರ್ಣಿ, ರಾಮಸ್ವಾಮಿ, ಮಲ್ಲಿಕಾರ್ಜುನ, ಜನಾರ್ದನ ರೆಡ್ಡಿ, ವಿಠ್ಠಲರಾವ್ ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement