ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ಕೊಡಿಸಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 23
ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಿ ಆಗ ಅವರಲ್ಲಿ ಹೆಚ್ಚು ಆತ್ಮಸ್ಥೈರ್ಯ, ಧೈರ್ಯ ಹೆಚ್ಚಾಗಿ ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ಕೋಣಿ ಕೂಸು ಕೊಳಿತು, ಬೀದಿ ಕೂಸು ಬೆಳಿತು ಎನ್ನುವ ಮಾತಿದೆ. ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಬಿಡಬೇಕು ಎಂದು ಅಭಿನವ ಬೀಚಿ ಗಂಗಾವತಿ ಪ್ರಾಣೇಶ ಹಾಸ್ಯದ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ತಾಲೂಕಿನ ಮಾಗಳ ಗ್ರಾಮದ ಗ್ರಾಮ ದೇವತೆ ಜಾತ್ರೆ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಹಾಸ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕನ್ನಡ ಶಾಲೆಯಲ್ಲಿ ಶಿಕ್ಷಣ ಕೊಡಿಸಿದಾಗ ಸಮಾಜದಲ್ಲಿ ಜನರ ಒಡನಾಟ ಬೆಳೆದು ಸ್ನೇಹ ಜೀವಿಗಳಾಗಿ ಬದುಕುತ್ತಾರೆ. ಅವರಲ್ಲಿ ಮಾತೃಭಾಷೆ ಬಗ್ಗೆ ಗೌರವ ಮತ್ತು ಕಾಳಜಿ ಬೆಳೆಸಿಕೊಳ್ಳುವಂತೆ ಮಾಡಬೇಕಾದುದು ಪಾಲಕರ ಮೇಲಿರುವ ಜವಾಬ್ದಾರಿ. ಅದನ್ನು ನಿರ್ವಹಿಸಿದರೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಸಂಸ್ಕಾರ ನೀಡಿ: ನಗರ ಪ್ರದೇಶದವರಂತೆ ಫ್ಯಾಷನ್‌ನತ್ತ ಮುಖ ಮಾಡದೆ ಪ್ರಕೃತಿ ದತ್ತವಾಗಿರುವ ಸೌಂದರ್ಯವನ್ನು ಸವಿಯಿರಿ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಆಹಾರ ಪದ್ಧತಿಯಲ್ಲಿಯೂ ಬಹಳಷ್ಟು ಬದಲಾವಣೆಯಾಗಿದೆ. ಆದರಿಂದ ಚಿಕ್ಕ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶವಿರುವ ಆಹಾರ ಕೊಟ್ಟು ಮಕ್ಕಳ ಆರೋಗ್ಯ ಕಾಪಾಡಿ ಎಂದು ಪಾಲಕರಿಗೆ ಸಲಹೆ ಮಾಡಿದರು.
ಹಳ್ಳಿಗಳಲ್ಲಿ ನೆಮ್ಮದಿ ಜೀವನ ನಡೆಸಲು ಉತ್ತಮ ವಾತವರಣವಿರುತ್ತದೆ, ಆದರೆ ನಗರ ಪ್ರದೇಶಗಳಲ್ಲಿ ಗೊಂದಲದ ಬದುಕು ಕಟ್ಟಿಕೊಂಡು ಸಂಬಂಧಗಳೇ ಮಾಯವಾಗುತ್ತವೆ. ಶುದ್ಧ ಪರಿಸರ, ಶುದ್ಧ ಗಾಳಿ, ನೀರು ಸಿಗಲಾರದ ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜೀವನದಲ್ಲಿ ಹಸಿವು ಮತ್ತು ಬಡತನ ದೊಡ್ಡ ಪಾಠ ಕಲಿಸುತ್ತವೆ. ಉತ್ತರ ಕರ್ನಾಟಕ ಮಂದಿ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ನಗುತ್ತಾರೆ. ಆದರೆ ಬೆಂಗಳೂರಿನ ಮಂದಿಗೆ ನಗುವೇ ಗೊತ್ತಿಲ್ಲ. ಆದರಿಂದ ನಿತ್ಯ ನಗು ಮನುಷ್ಯನಿಗೆ ಅಗತ್ಯ ನಗಿವಿನಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ಹಾಸ್ಯಭರಿತ ಶೈಲಿಯಲ್ಲೇ ಹೇಳಿದರು.
ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ ಅವರಿಗೆ ನರಸಿಂಹ ಜೋಷಿ, ಬಸವರಾಜ ಮಹಾಮನಿ ಸಾಥ್ ನೀಡಿದರು. ನಂತರ ಗ್ರಾಮದ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಜನಮನ ಸೆಳೆದವು. ಶಿಕ್ಷಕ ಡಿ. ವಿರೂಪಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ. ಸತ್ಯ ನಾರಾಯಣ ರೆಡ್ಡಿ, ರಾಮಾನಗೌಡ, ಪೂಜಾರ ಭರಮಜ್ಜ, ಮೈಲಾರಲಿಂಗಪ್ಪ, ಎಂ. ಶಾಂತರಾಜ, ತೋರಣಗಲ್ಲು ಜಿಂದಾಲ್ ಕಂಪನಿಯ ಹಿರಿಯ ವ್ಯವಸ್ಥಾಪಕ ದಯಾನಂದ ತೋಟದ್, ಪ್ರಕಾಶ, ಕೋಟೆಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಎಂ. ರಾಜೇಂದ್ರ ನಿರೂಪಿಸಿ, ಸ್ವಾಗತಿಸಿದರು.