ದೇವದಾಸಿಯರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 24
ಈ ಹಿಂದೆ ಅನಿಷ್ಟ ಪದ್ಧತಿ ಅಪ್ಪಿಕೊಂಡು ಈಗ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೇ ನೋವಿನ ಜೀವ ಸಾಗಿಸುತ್ತಿರುವ ರಾಜ್ಯದ ದೇವದಾಸಿಯರಿಗೆ ಪುನರ್ ವಸತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಈಡೇರಿಸಬೇಕೆಂದು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ದೇವದಾಸಿ ಮಹಿಳೆಯರ ವಿಮೋಚನ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿ, ದೇವದಾಸಿ ಮಹಿಳೆಯರಿಗಾಗಿ ಸರ್ಕಾರ ಪ್ರತ್ಯೇಕ ವಸತಿ ಯೋಜನೆ ರೂಪಿಸಬೇಕು, ಪ್ರತಿಯೊಬ್ಬರು ಮನೆ ಕಟ್ಟಿಕೊಳ್ಳಲು ರು. 2 ಲಕ್ಷ ನಿಗದಿ ಮಾಡಬೇಕು, ದೇವದಾಸಿಯರ ಎಲ್ಲ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು, ಈ ಅನಿಷ್ಠ ಪದ್ಧತಿಯಿಂದ ಅಮಾಯಕ ಬಾಲಕಿಯರನ್ನು ಸಂರಕ್ಷಿಸಲು ವಿಶೇಷ ಕಾಯ್ದೆ ರೂಪಿಸಬೇಕೆಂದು ಒತ್ತಾಯಿಸಿದರು.
ಇತರರಂತೆ ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಹೆಣಗಾಡುತ್ತಿರುವ ದೇವದಾಸಿಯರಿಗೆ ಸರ್ಕಾರ ಮಾಸಿಕ ಭತ್ಯೆ ರು. 1500ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದ ಅವರು, ಎಲ್ಲ ಬಡ ದಲಿತ ಕುಟುಂಬಗಳಿಗೆ ಅಂತ್ಯೋದಯ ಪಡಿತರ ಚೀಟಿ ಮಾಸಿಕ ಕನಿಷ್ಠ 35 ಕೆಜಿ ಆಹಾರ ಧಾನ್ಯ, 4 ಕೆಜಿ ಸಕ್ಕರೆ, ರಿಯಾಯ್ತಿ ದರದಲ್ಲಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡಬೇಕೆಂದು ಆಗ್ರಹಿಸಿದರು. ದೇವದಾಸಿ ವಿಮೋಚನಾ ಸಂಘದ ತಾಲೂಕು ಅಧ್ಯಕ್ಷೆ ಬಿ.ಕಮಲಮ್ಮ, ಗೌರವಾಧ್ಯಕ್ಷ ಸಣ್ಣತಮ್ಮಪ್ಪ ಮಾತನಾಡಿದರು. ಪ್ರತಿಭಟನೆಯ ನಂತರ ತಹಸೀಲ್ದಾರ್ ಏಜಾಜ್ ಬೇಗ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ಎಚ್. ಮಲ್ಲಮ್ಮ, ಉಪಾಧ್ಯಕ್ಷೆ ಲಕ್ಷ್ಮವ್ವ, ದುರುಗಮ್ಮ, ಬಂಡೆಮ್ಮ ಸೇರಿದಂತೆ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.