ಹೂವಿನಹಡಗಲಿ: ಬಿತ್ತನೆಗೆ ರೈತರ ಸಿದ್ಧತೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 24
ಈ ಬಾರಿ ಮುಂಗಾರು ಮಳೆ ಸಕಾಲಕ್ಕೆ ಸುರಿಯುವ ಲಕ್ಷಣಗಳಿದ್ದು, ತಾಲೂಕಿನಲ್ಲಿ ರೈತರು ಬಿತ್ತನೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆಯೂ ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತುನು ಸೇರಿದಂತೆ ಅಗತ್ಯ ಕ್ರಮ ಕೈಗೊಂಡಿದೆ.
ಕಳೆದೊಂದು ವಾರದಿಂದ ತಾಲೂಕಿನ ಕೆಲವೆಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ವಾರ್ಷಿಕ ಸರಾಸರಿ 615 ಮಿ.ಮೀ. ಮಳೆಯಾಗಬೇಕಿದೆ. ಕಳೆದ ಬಾರಿ 488.97 ಮಿ.ಮೀ. ಮಳೆಯಾಗಿತ್ತು. ಇಷ್ಟೊತ್ತಿಗೆ ಈ ಬಾರಿ ವಾಡಿಕೆಯಂತೆ 108.02 ಮಿ.ಮೀ. ಮಳೆ ಬರಬೇಕಿತ್ತು. ಆದರೆ 56.06 ಮಿ.ಮೀ. ಮಳೆಯಾಗಿದ್ದು, ಇನ್ನು 41.07 ಮಳೆ ಕೊರತೆ ಉಂಟಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಲ್. ಸಿದ್ದೇಶ್ವರ ತಿಳಿಸಿದ್ದಾರೆ.
65 ಸಾವಿರ ಹೆಕ್ಟೇರ್ ಬಿತ್ತನೆ ಗುರಿ: ಇತ್ತೀಚಿಗೆ ತಾಲೂಕಿನಲ್ಲಿ ಸುರಿದಿರುವ ಮಳೆಯಿಂದ ಯಾವ ಬಿತ್ತನೆ ಕಾರ್ಯವನ್ನೂ ರೈತರು ಆರಂಭಿಸಿಲ್ಲ. ಬಿತ್ತನೆಗಾಗಿ ಜಮೀನು ಹದಗೊಳಿಸುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ. ತಾಲೂಕಿನಲ್ಲಿ 93,921 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು, ಇದರಲ್ಲಿ 74,878 ಹೆಕ್ಟೇರ್ ಸಾಗುವಳಿ ಪ್ರದೇಶ ಹೊಂದಿದೆ. 65,436 ಹೆಕ್ಟೇರ್ ಖುಷ್ಕಿ ಭೂಮಿ, 9,441 ಹೆಕ್ಟೇರ್ ನೀರಾವರಿ ಪ್ರದೇಶ ಇದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ 65 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ತಾಲೂಕಿನಲ್ಲಿ ಸಣ್ಣ, ಅತಿಸಣ್ಣ ಮತ್ತು ಇತರೆ ರೈತರು ಸೇರಿ ಒಟ್ಟು 39,429 ರೈತರಿದ್ದಾರೆಂದು ವಿವರಿಸಿದರು.
ಕಳೆದ ಮುಂಗಾರು ಹಂಗಾಮಿನಲ್ಲಿ 58,979 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಮೆಕ್ಕೆಜೋಳದತ್ತ ರೈತರು ಮುಖ ಮಾಡಿದ್ದು, ಈ ಬಾರಿ ಸುಮಾರು 30-35 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಲಿದೆ. ಜತೆಗೆ ಸೂರ್ಯಕಾಂತಿ, ಬತ್ತ, ಸಜ್ಜೆ, ಹೆಸರು, ಶೇಂಗಾ, ತೊಗರಿ ಬೆಳೆಯಲಾಗುತ್ತಿದ್ದು, ಕಳೆದ ಬಾರಿ 2,277 ಕ್ವಿಂಟಲ್ ವಿವಿಧ ಬಿತ್ತನೆ ಬೀಜವನ್ನು ಶೇ. 50 ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗಿತ್ತು. ವಾಡಿಕೆಯಂತೆ 30 ಸಾವಿರ ಕ್ವಿಂಟಲ್ ಬೀಜ ಮಾರಾಟವಾಗಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಬಿತ್ತನೆಗೆ ಹಿನ್ನಡೆಯಾಗಿತ್ತು ಎಂದರು.
ಬಿತ್ತನೆ ಬೀಜ ದಾಸ್ತಾನು: ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಬಿತ್ತನೆ ಬೀಜಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಸದ್ಯ ತಾಲೂಕಿನ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳನ್ನು ಶೇ. 50 ರಿಯಾಯ್ತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. 36 ಕ್ವಿಂಟಲ್ ಹೈಬ್ರಿಡ್ ಜೋಳ, 5 ಕ್ವಿಂಟಲ್ ಸಜ್ಜೆ, 50 ಕ್ವಿಂಟಲ್ ತೊಗರಿ, 10 ಕ್ವಿಂಟಲ್ ರಾಗಿ, 2 ಕ್ವಿಂಟಲ್ ಸೂರ್ಯಕಾಂತಿ, 50 ಕ್ವಿಂಟಲ್ ಹೆಸರು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.
ಗೊಬ್ಬರ ದಾಸ್ತಾನು: ತಾಲೂಕಿನಲ್ಲಿ 48 ಖಾಸಗಿ, 22 ಸಹಕಾರ ಸಂಘಗಳು ಸೇರಿದಂತೆ ಒಟ್ಟು 70 ಗೊಬ್ಬರ ಹಾಗೂ ಕೃಷಿ ಪರಿಕರಗಳ ಮಾರಾಟಗಾರರಿದ್ದಾರೆ. 12 ಸಾವಿರ ಟನ್ ವಿವಿಧ ರಸಗೊಬ್ಬರ ದಾಸ್ತಾನಿದ್ದು. 1,135 ಟನ್ ರಸಗೊಬ್ಬರಕ್ಕಾಗಿ ಸೊಸೈಟಿಗಳು ಬೇಡಿಕೆ ಸಲ್ಲಿಸಿದ್ದಾರೆಂದು ತಿಳಿಸುತ್ತಾ, ಈ ಬಾರಿ ಮುಂಗಾರಿಗೆ 6 ಸಾವಿರ ಟನ್ ರಸಗೊಬ್ಬರ ಅಗತ್ಯವಿದೆ. ಯಾವ ರಸಗೊಬ್ಬರ ಕೊರತೆ ಕಾಡುತ್ತಿಲ್ಲ ಎಂದರು.
ಪರವಾನಗಿ ರದ್ದು: ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ, ಕೃತಕ ಅಭಾವ ಸೃಷ್ಟಿಸಿದರೆ ಅವರ ವಿರುದ್ಧ ರಸಗೊಬ್ಬರ ನಿಯಂತ್ರಣಾ ಕಾಯ್ದೆ ಮತ್ತು ಅಗತ್ಯ ವಸ್ತುಗಳ ನಿಯಂತ್ರಣಾ ಕಾಯ್ದೆಯಡಿ ಶಿಸ್ತುಕ್ರಮ ಜರುಗಿಸಿ ಮಾರಾಟ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಳಪೆ ಬಿತ್ತನೆ ಬೀಜ, ಕಲಬೆರಕೆ ರಸಗೊಬ್ಬರ ಕಂಡು ಬಂದರೆ ಅಗತ್ಯ ದಾಖಲೆ ಸಮೇತ ಕೃಷಿ ಇಲಾಖೆಗೆ ದೂರು ನೀಡಬೇಕು. ಇಲ್ಲವಾದರೆ 08399-240368 ಸಹಾಯವಾಣಿಗೆ ದೂರು ಸಲ್ಲಿಸಬಹುದೆಂದು ರೈತರಿಗೆ ಸೂಚನೆ ನೀಡಿದ್ದಾರೆ.