ಕೃಷಿ ಕ್ಷೇತ್ರದಲ್ಲಿ ಹಿನ್ನಡೆಯಾದರೆ ಅಭಿವೃದ್ಧಿ ಅಸಾಧ್ಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 25
ಕೃಷಿಯಿಂದ ವಿಮುಖವಾದ ಯಾವುದೇ ರಾಷ್ಟ್ರವು ಅಭಿವೃದ್ಧಿ ಸಾಧಿಸುವುದಿಲ್ಲ ಎಂದು ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಹಾಗೆಯೇ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸದಿದ್ದರೆ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ. ಮಂಜಪ್ಪ ಡಿ.ಹೊಸಮನಿ ತಿಳಿಸಿದರು.
ಶುಕ್ರವಾರ ವಿವಿಯ ಸಭಾಂಗಣದಲ್ಲಿ ಮಾನವ ಅಭಿವೃದ್ಧಿ ಅಧ್ಯಯನ ಹಾಗೂ ಜನಸಂಖ್ಯಾ ಸ್ಥಿರತೆ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಂದ ವ್ಯವಸಾಯ ವೃತ್ತಿಯನ್ನು ತೊರೆದು ಹಳ್ಳಿಗರು ನಗರಕ್ಕೆ ವಲಸೆ ಬರುತ್ತಿದ್ದಾರೆ. ಇದರಿಂದ ದೇಶದ ವ್ಯವಸಾಯೋತ್ಪನ್ನಗಳ ಉತ್ಪಾದನೆಯಲ್ಲಿ ಇಳಿಮುಖವಾಗುತ್ತಿದ್ದು, ದೇಶದ ಆಹಾರ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಹೇಳಿದರು.
ವ್ಯವಸಾಯ ಲಾಭದಾಯಕವಾಗಿಲ್ಲದ ಕಾರಣ ಈ ಬಗೆಯ ವಲಸೆ ಜರುಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಠ್ಯದಲ್ಲಿ ಶೇ. 60ರಷ್ಟು ಭಾಗವನ್ನು ಕೃಷಿ ಅಧ್ಯಯನ, ವೈಜ್ಞಾನಿಕ ನಿರ್ವಹಣೆಯ ಕುರಿತಾದ ಪಠ್ಯಗಳಿಂದ ತುಂಬಿದಲ್ಲಿ ಕೃಷಿ ಕ್ಷೇತ್ರದಲ್ಲಿ ಆಶಾದಾಯಕ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ಪ್ರೊ. ಹೊಸಮನಿ ಹೇಳಿದರು.
ಸರ್ಕಾರಗಳು ಮಾನವ ಅಭಿವೃದ್ಧಿ ವರದಿಗಳನ್ನು ಆಧರಿಸಿ ನಾಗರಿಕರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಇಂತಹ ಅಭಿವೃದ್ಧಿ ಅಧ್ಯಯನಗಳಿಂದ ನಾವು ಮುಂಬರುವ ದಿನಗಳಲ್ಲಿ ಯೋಜನೆಯ ವೆಚ್ಚಗಳನ್ನು ಕಡಿತಗೊಳಿಸಿ, ನಾಗರಿಕರಿಗೆ ಉತ್ತಮ ಸೇವಾ ಸೌಲಭ್ಯಗಳನ್ನು ತಲುಪಿಸಬಹುದಾಗಿದೆ ಎಂದು ಹೇಳಿದರು. ದೇಶದ ವಿವಿಧ ವರ್ಗಗಳ ಜನರು, ತಜ್ಞರು, ವೈದ್ಯರು, ತಾಂತ್ರಿಕ ತಜ್ಞರು, ಆರ್ಥಿಕ ತಜ್ಞರು, ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ಎಲ್ಲರೂ ಈ ಮಾನವ ಅಭಿವೃದ್ಧಿ ವರದಿಯ ತಯಾರಿಕೆಯಲ್ಲಿ ಭಾಗಿಯಾಗಬೇಕು. ಆಗ ನಮ್ಮ ಅಭಿವೃದ್ಧಿಯ ಸಾಧನೆ ಯಾವ ಮಟ್ಟದಲ್ಲಿದೆ ಎಂಬುದನ್ನು ಅರಿಯಬಹುದಾಗಿದೆ ಎಂದರು.
ರಾಜಕಾರಣಿಗಳು ಮಾನವ ಅಭಿವೃದ್ಧಿಯ ವರದಿಗಳ ಮಹತ್ವವನ್ನು ಮನಗಾಣಬೇಕಿದೆ. ಅವರಿಗೆ ಒಂದು ಪ್ರದೇಶದ ಜನಜೀವನ, ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಕುರಿತಾದ ಜೀವನ ಮಟ್ಟ ಕುರಿತಾದ ವರದಿಯನ್ನು ನೀಡಿ ಪರಿಸ್ಥಿತಿಯ ಅರಿವು ಮೂಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದಕ್ಕೂ ಮುಂಚೆ ಮೈಸೂರು ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರೊ. ಬಿ.ಕೆ.ತುಳಸೀಮಾಲಾ ಮಾನವ ಅಭಿವೃದ್ಧಿ ವರದಿ- ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಹಾಗೂ ಜನಸಂಖ್ಯಾ ಸ್ಥಿರತೆ ಭವಿಷ್ಯದ ಕಾರ್ಯಸೂಚಿ ಎಂಬ ವಿಷಯ ಕುರಿತು ಧಾರವಾಡದ ಕರ್ನಾಟಕ ವಿವಿ ಅರ್ಥಶಾಸ್ತ್ರ ವಿಭಾಗದ ಪ್ರೊ. ಎಸ್.ಟಿ ಬಾಗಲಕೋಟಿ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವರಾದ ಕೆ. ವಿಜಯಕುಮಾರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಸವರಾಜ್ ಬೆಣ್ಣಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.