ಶುಲ್ಕ ಹೆಚ್ಚಳಕ್ಕೆ ವಿರೋಧ
ಕಂಪ್ಲಿ: ಕಂಪ್ಲಿ ಬ್ರೈಟ್‌ವೇ ಸ್ಕೂಲ್‌ನ ಆಡಳಿತ ಮಂಡಳಿ ಪೋಷಕರ ಗಮನಕ್ಕೆ ತರದೆ ಪ್ರತಿವರ್ಷ ಶೇ. 100ರಷ್ಟು ಶಾಲಾ ಶುಲ್ಕವನ್ನು ಹೆಚ್ಚಳ ಮಾಡುತ್ತಿದ್ದು, ಈ ಕುರಿತಾಗಿ ಕ್ರಮ ಕೈಗೊಳ್ಳಬೇಕೆಂದು ರಾಮಸಾಗರ ಗ್ರಾಮದ ವಿದ್ಯಾರ್ಥಿಗಳು, ಪೋಷಕರು ಶನಿವಾರ ಹೊಸಪೇಟೆ ಬಿಇಓ ಪಿ. ಸುನಂದಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪೋಷಕರಾದ ರಾಮಸಾಗರ ಗ್ರಾಮದ ಆರ್.ಟಿ. ಶರಣಗೌಡ, ಟಿ. ಶರಣಸ್ವಾಮಿ, ಜಿ. ರಾಜಾರಾವು, ಎಚ್. ವಿರೂಪಾಕ್ಷಿ, ಬಿ. ಲಕ್ಷ್ಮಣ, ಜೆ.ಎಂ. ರಾಜೇಶ, ಜೆ.ಜೆ. ಕೃಷ್ಣಮೂರ್ತಿ, ಎಂ.ಎನ್. ಪ್ರಭು, ಕೆ. ಶಿವಕುಮಾರ, ಎಚ್. ಚನ್ನಬಸವನಗೌಡ, ಕೆ.ನಾಗರಾಜ, ಜಿ. ರವಿಶಂಕರ ಇವರು, ಆಡಳಿತ ಮಂಡಳಿ ಆಧ್ಯಕ್ಷ ಡಿ.ವಿ. ಸತ್ಯನಾರಾಯಣ ಇವರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಸಹಿತ ಅವರು ನಮ್ಮ ಮನವಿಯನ್ನು ತಿರಸ್ಕರಿಸಿ, ನೀವು ಟಿ.ಸಿ. ತೆಗೆದುಕೊಂಡು ಹೋಗಬಹುದು. ಇಲ್ಲವಾದರೆ ನಾವು ನಿಗದಿ ಮಾಡಿದ ಶಾಲಾ ಶುಲ್ಕವನ್ನು ಕಟ್ಟಬೇಕೆಂದು ಬೆದರಿಕೆ ಹಾಕಿರುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾವೇ ಸ್ವತಃ ಬಂದು ನಮ್ಮ ಮಕ್ಕಳನ್ನು ಶಾಲೆಯಲ್ಲಿ ನೋಂದಣಿ ಮಾಡಿಸಬೇಕು. ಶಾಲಾ ಆಡಳಿತ ಮಂಡಳಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.