ಸಿಇಟಿ ಪ್ರವೇಶ ಪ್ರಕ್ರಿಯೆ ತಡೆಗೆ ಸರ್ಕಾರಕ್ಕೆ ಆಗ್ರಹ
ಹೂವಿನಹಡಗಲಿ: ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ 371(ಜೆ) ಸ್ಥಾನಮಾನ ಅನುಷ್ಠಾನ ಆಗುವವರೆಗೂ ಎಂಜಿಯರಿಂಗ್, ಮೆಡಿಕಲ್ ಕೋರ್ಸ್ಗಳ ಸಿಇಟಿ ಪ್ರವೇಶ ಪ್ರಕ್ರಿಯೆಗಳನ್ನು ತಡೆ ಹಿಡಿಯಬೇಕೆಂದು ಹೈ-ಕ 371 ಕಲಂ ಹೋರಾಟ ಸಮಿತಿಯ ಸಂಚಾಲಕ ಪ್ರೊ. ಎಸ್.ಎಸ್. ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಶನಿವಾರ ಪ್ರತಿಕಾ ಹೇಳಿಕೆ ನೀಡಿದ ಅವರು, ಈ ಕುರಿತು ಹೈ-ಕ ಪ್ರದೇಶದ 4 ವಿವಿಧ ಸಚಿವರುಗಳಿಗೆ ಮನವಿ ನೀಡಲಾಗಿದೆ. 371ನೇ ಕಲಂಗೆ ಕೇಂದ್ರದ ಯುಪಿಎ ಸರ್ಕಾರ ಈ ಹಿಂದೆಯೇ ಒಪ್ಪಿಗೆ ನೀಡಿದೆ. ಆದರೆ, ಹಿಂದಿನ ರಾಜ್ಯ ಸರ್ಕಾರ ಈ ಸ್ಥಾನಮಾನವನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಇದರಿಂದ ಈ ಭಾಗದ 6 ಜಿಲ್ಲೆಗಳ ಎಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳು ಹೈ-ಕ ಪ್ರದೇಶದ ವಿಶೇಷ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೈ-ಕ ಪ್ರದೇಶ ವ್ಯಾಪ್ತಿಯಲ್ಲಿನ 6 ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಇದನ್ನೇ ಮಾನದಂಡವನ್ನಾಗಿ ಇಟ್ಟುಕೊಂಡು ಜಯ ಸಾಧಿಸಿದ್ದಾರೆ. ರಾಜ್ಯದಲ್ಲೂ ಆ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದರು. ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಈ ವಿಶೇಷ ಮೀಸಲಾತಿ ಸೌಲಭ್ಯವನ್ನು ಶೀಘ್ರ ಜಾರಿಗೊಳಿಸಬೇಕು. ಜತೆಗೆ ಈ 371ನೇ ಕಲಂ ಅನುಷ್ಠಾನವಾಗುವವರೆಗೂ ಸಿಇಟಿ ಪ್ರಕ್ರಿಯೆಯನ್ನು ತಡೆ ಹಿಡಿದು, ಈ ಭಾಗದಿಂದ ವಂಚಿತವಾಗುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಇದು ಸಾಧ್ಯವಾಗದಿದ್ದರೆ ಸಿಇಟಿಯ ಮೊದಲೆರಡು ಸುತ್ತುಗಳ ಬಳಿಕ ಉಳಿದ ಎಲ್ಲ ಸೀಟುಗಳನ್ನು ಹೈ-ಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಿಡುವಂತೆ ಈ ಭಾಗದ ಜನಪ್ರತಿನಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಪಾಟೀಲ ಆಗ್ರಹಿದ್ದಾರೆ.