ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ತುಂಗಭದ್ರೆ ನಾಡಲ್ಲೂ ನೀರಿಗಾಗಿ ತತ್ವಾರ

Mainashree
Updated On : 27 May 2013, 11:07 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 26
ದೀಪದ ಕೆಳಗೆ ಕತ್ತಲು ಎನ್ನುವಂತೆ ಬಿಸಿಲನಾಡು ಬಳ್ಳಾರಿಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ ನೀರಿನ ಬವಣೆ ಮಾತ್ರ ತಪ್ಪಿಲ್ಲ. ಜಿಲ್ಲೆಯ 7 ತಾಲೂಕುಗಳಲ್ಲಿ ನಾಲ್ಕು ತಾಲೂಕುಗಳಿಗೆ ಜಲಾಶಯ ಕುಡಿಯುವ ನೀರನ್ನು ಒದಗಿಸುತ್ತಿದ್ದು, ಇನ್ನುಳಿದ ತಾಲೂಕಿನ ಜನತೆಗೆ ಕೊಳವೆಬಾವಿಗಳೇ ಗತಿ. ಸತತ ಎರಡು ವರ್ಷಗಳ ಬರದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮಳೆ ಬಾರದಿದ್ದರೆ, ನೀರಿಗಾಗಿ ಜಿಲ್ಲೆಯಲ್ಲಿ ಹಾಹಾಕಾರ ಉಂಟಾಗುವುದಂತೂ ಖಚಿತ.
ಈಗಾಗಲೇ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಕುಡಿಯುವ ನೀರು ಪೂರೈಕೆಗೆ ಬೇಕಾಗುವ ಪರ್ಯಾಯ ಕ್ರಮಕ್ಕೆ ಮುಂದಾಗಿದೆ. ಕಳೆದ ವರ್ಷ ನೀರಿನ ಸಮಸ್ಯೆ ಭೀಕರತೆ ಕಂಡಿದ್ದರಿಂದ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡು, ಕಾಲುವೆ ನೀರನ್ನು ಸಂಗ್ರಹಿಸಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ತೋರಿರುವ ಹಿನ್ನೆಲೆಯಲ್ಲಿ ಈವರೆಗೆ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸಿಲ್ಲ. ಜಿಲ್ಲೆಯ 1,012 ಜನವಸತಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತದೆ ಎಂಬ ಅಂದಾಜಿದ್ದು, ಈಗಾಗಲೇ ಸಂಬಂಧಪಟ್ಟ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೂ ಕೆಲ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ನೀರಿಗಾಗಿ ಎಷ್ಟು ಖರ್ಚು? ಎಷ್ಟು ಕೆಲಸ?: 2012-13ನೇ ಸಾಲಿನಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದಾಗಿ ರು. 77.94 ಕೋಟಿ ವ್ಯಯಿಸಲಾಗಿದೆ. ಪ್ರತಿ ತಾಲೂಕಿಗೆ ಕುಡಿಯುವ ನೀರು ಪೂರೈಸಲು ರು. 60 ಲಕ್ಷ ಬಿಡುಗಡೆ ಮಾಡಲಾಗಿತ್ತು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 78 ಕೆರೆಗಳು ಇವೆ. ಅದರಲ್ಲಿ 6 ಕೆರೆಗಳು ನಿರುಪಯುಕ್ತವಾಗಿದ್ದು, ಇನ್ನುಳಿದ 72 ಕೆರೆಗಳು ಖಾಲಿ ಉಳಿದಿವೆ. ಕುಡಿಯುವ ನೀರು ಪೂರೈಕೆಗೆ ಬೇಕಾಗುವ ಕಾರ್ಯಕ್ರಮಗಳನ್ನು ರೂಪಿಸಲು ಒಟ್ಟಾರೆ 1,844 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 1,579 ಕಾಮಗಾರಿಗಳು ಪೂರ್ಣಗೊಂಡಿದ್ದು, ರು. 76.29 ಕೋಟಿ ವೆಚ್ಚ ಮಾಡಲಾಗಿದೆ. ಇನ್ನು 265 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಅಲ್ಲದೆ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಕೆಗೆ ಸಂಬಂಧಪಟ್ಟಂತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ರು. 164 ಕೋಟಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆಯಾಗಿ ಕುಡಿಯುವ ನೀರಿಗೆ ರು. 77.94 ಕೋಟಿ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದಾಗಿ ರು. 20 ಕೋಟಿ ಮೀಸಲಿಡಲಾಗಿದೆ.
462 ಫ್ಲೋರೈಡ್‌ಯುಕ್ತ ನೀರು ಗ್ರಾಮಗಳು: ಜಿಲ್ಲೆಯಲ್ಲಿ ಒಟ್ಟಾರೆಯಾಗಿ 462 ಫ್ಲೋರೈಡ್‌ಯುಕ್ತ ನೀರು ಹೊಂದಿರುವ ಗ್ರಾಮಗಳಿದ್ದು, ಈಗಾಗಲೇ ಜಿಲ್ಲಾಡಳಿತವು ಫ್ಲೋರೈಡ್ ಹೋಗಲಾಡಿಸುವ ಉದ್ದೇಶದಿಂದ ಫಿಲ್ಟರ್ ನೀರು ಒದಗಿಸಲು ಮುಂದಾಗಿದೆ. ಬಳ್ಳಾರಿ- 112, ಹೊಸಪೇಟೆ- 36, ಸಂಡೂರು-14, ಸಿರುಗುಪ್ಪ- 46, ಹೂವಿನಹಡಗಲಿ- 68, ಕೂಡ್ಲಿಗಿ- 160, ಹಗರಿಬೊಮ್ಮನಹಳ್ಳಿ ತಾಲೂಕಿನ 26 ಹಳ್ಳಿಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಪೂರೈಕೆಯಾಗುತ್ತಿದೆ. ಈ ಗ್ರಾಮಗಳಿಗೆಪರ್ಯಾಯ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಜಿಲ್ಲಾಡಳಿತ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಫ್ಲೋರೈಡ್ ನೀರಿನಿಂದ ಹಲ್ಲುಗಳು ಕಂದಾಗುವುದು, ನವಯುವಕ ಮುದುಕನಂತಾಗುವುದು, ಕಾಲುಬೇನೆ ಸೇರಿದಂತೆ ಇತರ ರೋಗಗಳಿಗೆ ಕಾರಣವಾಗುತ್ತಿದೆ. ಇನ್ನು ಕೂಡ್ಲಿಗಿ ತಾಲೂಕಿನಲ್ಲಿ 217 ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ರು. 260 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ.
ಟ್ಯಾಂಕರ್ ಮೂಲಕ ನೀರು ಪೂರೈಕೆ: ಸದ್ಯದ ಮಟ್ಟಿಗೆ ಜಿಲ್ಲೆಯ ಸಂಡೂರು ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಸಾಕಷ್ಟು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ನೀಡಲಾಗಿರುವ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಕೆಚ್ಚಿನಬಂಡಿ, ಸೊನ್ನ, ರಾಯರಾಳು ತಾಂಡ, ಓಬಳಾಪುರ, ಕೋಗಳಿ ತಾಂಡ ಸೇರಿ ಐದು ಗ್ರಾಮಗಳಲ್ಲಿ ಟ್ಯಾಂಕರ್‌ಗಳ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಸಂಡೂರು ತಾಲೂಕಿನ ಅಂತಾಪುರ ಹಾಗೂ ವಿಠ್ಠಲಾಪುರಗಳಲ್ಲಿವೂ ಟ್ಯಾಂಕರ್ ನೀರೇ ಗತಿ. ನೀರು ಪೂರೈಕೆಗಾಗಿ 18 ಮಲ್ಟಿವಿಲೇಜ್ ಸ್ಕೀಮ್ ಮಾಡಲಾಗಿದ್ದು, ಇದರಿಂದಾಗಿ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಕೆನಾಲ್ ಹರಿಯುವ ಪ್ರದೇಶದಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಇದೆ. ಜಿಲ್ಲೆಯ ಬಳ್ಳಾರಿ ವಿಭಾಗದ 30 ಕಡೆಗಳಲ್ಲಿ ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ನೀರು ಪೂರೈಕೆ ಹೇಗಿದೆ?: ಜಿಲ್ಲಾ ಕೇಂದ್ರ ಬಳ್ಳಾರಿ ಮಹಾನಗರದಲ್ಲಿ ಕಳೆದ ವರ್ಷ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ, ರಸ್ತೆ ರೋಖೋ ನಡೆದಿತ್ತು. ಬಳ್ಳಾರಿಗೆ ನೀರು ಪೂರೈಕೆಗಾಗಿ ಅಲ್ಲೀಪುರ ಕೆರೆಯೇ ಮೂಲಾಧಾರವಾಗಿದೆ. ಮಹಾನಗರಕ್ಕೆ ನೀರು ಪೂರೈಕೆ ಮಾಡುವ ಅಲ್ಲೀಪುರ ಕೆರೆಯಲ್ಲಿ ಈ ಬಾರಿ ಜನವರಿಯಿಂದಲೇ 7.5 ಮೀಟರ್ ನೀರು ಸಂಗ್ರಹಿಸಲಾಗಿತ್ತು. ಪ್ರಸ್ತುತ 3.35 ಮೀಟರ್ ನೀರು ಲಭ್ಯವಿದೆ. ಇನ್ನು ಜು. 20ರ ಮೇಲೆ ಜಲಾಶಯದಿಂದ ಕಾಲುವೆಗೆ ನೀರು ಬಿಡುವುದರಿಂದ ಅಲ್ಲೀಪುರ ಕೆರೆಯಲ್ಲಿರುವ ನೀರನ್ನು ದಿನಕ್ಕೆ 50 ಎಂಎಲ್‌ಡಿ ನೀರು ಬಿಟ್ಟರೆ 60 ರಿಂದ 50 ದಿನಗಳವರೆಗೆ ನೀರು ಪೂರೈಕೆ ಮಾಡಬಹುದು. ಆದರೆ ಪೂರೈಕೆಯಲ್ಲಿ ವೃಥಾ ಪೋಲಾಗದಂತೆ ಮಿತವ್ಯಯದಿಂದ ನೀರು ಬಳಕೆ ಮಾಡಿದರೆ ನೀರಿನ ಸಮಸ್ಯೆ ಉಂಟಾಗದು. ಇನ್ನು ಮೋಕಾದ ಎರಡು ಕೆರೆಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ ಕಳೆದ ವರ್ಷದಿಂದ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ ಜುಲೈ ಹೊತ್ತಿಗೆ ಮಳೆ ಬಂದು, ಜಲಾಶಯ ತುಂಬಿ ಕಾಲುವೆಗೆ ನೀರು ಬಿಟ್ಟರೆ ಮಾತ್ರ ಏನು ಸಮಸ್ಯೆಯಾಗದು. ಇಲ್ಲದಿದ್ದರೆ ನೀರಿನ ಸಮಸ್ಯೆ ಉಲ್ಬಣ ಖಂಡಿತ.

ಕುಡಿವ ನೀರಿನ ಮೂಲ
ಬಳ್ಳಾರಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ತುಂಗಭದ್ರಾ ಜಲಾಶಯವೇ ಕುಡಿಯುವ ನೀರಿನ ಮೂಲವಾಗಿದೆ. ಹೊಸಪೇಟೆ, ಬಳ್ಳಾರಿ, ಸಿರುಗುಪ್ಪ, ಸಂಡೂರಿನ ಕೆಲ ಭಾಗದಲ್ಲಿ ತುಂಗಭದ್ರಾ ಜಲಾಶಯದ ನೀರು ಪೂರೈಕೆಯಾಗುತ್ತಿದೆ. ಹೊಸಪೇಟೆ ತಾಲೂಕಿನಲ್ಲಿ ಶೇ. 70ರಷ್ಟು ತುಂಗಭದ್ರಾ ಜಲಾಶಯದ ನೀರು ಪೂರೈಕೆಯಾಗುತ್ತಿದೆ. ಇನ್ನು ಸಿರುಗುಪ್ಪ ಮತ್ತು ಬಳ್ಳಾರಿ ತಾಲೂಕು ಜಲಾಶಯದ ನೀರು ಹಾಗೂ ಕೊಳವೆಬಾವಿ ನೀರಿನ ಮೇಲೆ ಅವಲಂಬಿತವಾಗಿವೆ. ಸಂಡೂರು ತಾಲೂಕಿನಲ್ಲಿ ಸಂಡೂರು ಮತ್ತು ದೋಣಿಮಲೈಗೆ ನಾರಿಹಳ್ಳ ಜಲಾಶಯವೇ ನೀರಿನ ಮೂಲ. ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ತಾಲೂಕು ಹಾಗೂ ಕೊಟ್ಟೂರಿಗೆ ತುಂಗಭದ್ರಾ ಹಿನ್ನೀರು ಪೂರೈಕೆಯಾಗುತ್ತಿದೆ. ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ಹಿನ್ನೀರು ಪೂರೈಕೆಯಾದರೆ, ಇನ್ನುಳಿದ ಹಳ್ಳಿಗಳಿಗೆ ಕೊಳವೆ ಭಾವಿಗಳ ನಿರೇ ಗತಿಯಾಗಿದೆ. ಇನ್ನು ಹೂವಿನಹಡಗಲಿ ತಾಲೂಕಿನಲ್ಲಿ ತುಂಗಭದ್ರಾ ನದಿ ಹರಿಯುವುದರಿಂದ ನೀರಿನ ಸಮಸ್ಯೆ ಅಷ್ಟಾಗಿ ಉದ್ಭವಿಸಿಲ್ಲ. ಇನ್ನುಳಿದಂತೆ ಅಂತರ್ಜಲ, ಕೈ ಪಂಪ್, ಕೆರೆ, ಗೋಕಟ್ಟೆಗಳು ಹಾಗೂ ಕೊಳವೆ ಬಾವಿಗಳೇ ಇಲ್ಲಿನ ಜನತೆಗೆ ನೀರಿನ ಮೂಲವಾಗಿವೆ.
ಮುಂಜಾಗ್ರತೆ ಆವಶ್ಯ
ಬರದ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಅಧಿಕಾರಿಗಳು ಬೇಸಿಗೆ ಪೂರ್ವದಲ್ಲಿ ಮುಂಜಾಗ್ರತೆ ಕ್ರಮ ಕೈಗೊಂಡರೆ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ಇನ್ನು ವಿದ್ಯುತ್ ಸಮಸ್ಯೆಯಿಂದ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಅಗತ್ಯ ಸೇವೆಗಳಾದ ಕುಡಿಯುವ ನೀರು, ವಿದ್ಯುತ್ ಪೂರೈಕೆಗೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
ಕೆ. ಸುಬ್ಬರಾವ್, ವಕೀಲ, ಬಳ್ಳಾರಿ
ಎಂಟು ದಿನಕ್ಕೊಮ್ಮೆ
ಎಂಟು ದಿನಕ್ಕೊಮ್ಮೆ ನೀರು ಬಿಡುವುದರಿಂದ ನೀರು ಸಮಸ್ಯೆ ಹೆಚ್ಚಾಗುತ್ತಿದೆ. ನೀರಿಗಾಗಿಯೇ ಕೆಲಸ ಬಿಟ್ಟು ಕಾಯಬೇಕಾಗಿದೆ. ಇದರಿಂದಾಗಿ ಎಲ್ಲ ಕೆಲಸಗಳು ಯಡವಟ್ಟಾಗುತ್ತದೆ. ನಿಗದಿತ ಸಮಯ ಇಲ್ಲದೆ ನೀರು ಪೂರೈಕೆ ಮಾಡುತ್ತಾರೆ. ನೀರು ಬಿಟ್ಟಾಗ ಹಿಡಿಯದಿದ್ದರೆ 8 ದಿನಗಳವರೆಗೆ ಕಾಯಬೇಕಾಗುತ್ತದೆ. ಇನ್ನು 8 ದಿನಗಳಿಗೊಮ್ಮೆ ನೀರು ಬಿಟ್ಟರೆ ಸಂಗ್ರಹಿಸುವುದು ಕಷ್ಟ. ಮನೆಗಳು ಒತ್ತೊತ್ತಾಗಿ ಇರುವುದರಿಂದ ನೀರು ಸಂಗ್ರಹಿಸಲು ಸಂಪು ಇನ್ನಿತರ ವ್ಯವಸ್ಥೆ ಇರುವುದಿಲ್ಲ. ಸಮರ್ಪಕ ನೀರು ಪೂರೈಕೆಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಎಸ್. ಮಂಜುನಾಥ್, ಸಹಾಯಕ ಪ್ರಾಧ್ಯಾಪಕ, ಎಂಜಿನಿಯರಿಂಗ್ ಕಾಲೇಜು, ಬಳ್ಳಾರಿ
ಅಂತರ್ಜಲ ಮಟ್ಟ ಕುಸಿತ
ಸತತ ಎರಡು ವರ್ಷ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. 2011ರಲ್ಲಿ ನಿರೀಕ್ಷೆಗಿಂತ ಶೇ. 16.5ರಷ್ಟು ಮಳೆ ಕಡಿಮೆಯಾಗಿದ್ದರೆ, 2012ರಲ್ಲಿ ಶೇ. 13.6ರಷ್ಟು ಮಳೆ ಕಡಿಮೆಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿನ 70 ಅಧ್ಯಯನ ಬಾವಿಗಳನ್ನು ಪರಿಶೀಲನೆ ನಡೆಸಿದ್ದು, ಅದರಲ್ಲಿ 20 ಬಾವಿಗಳಲ್ಲಿ 0.2 ಮೀಟರ್‌ನಷ್ಟು ಅಂತರ್ಜಲ ಮಟ್ಟ ಕುಸಿದಿದೆ. 6 ಬಾವಿಗಳಲ್ಲಿ 2ರಿಂದ 4 ಮೀಟರ್, 2 ಬಾವಿಗಳಲ್ಲಿ 4ರಿಂದ 6 ಮೀಟರ್, 6 ಬಾವಿಗಳಲ್ಲಿ 6 ಮೀಟರ್‌ನಷ್ಟು ಅಂತರ್ಜಲ ಮಟ್ಟ ಕುಸಿದಿದೆ.

 ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement