ಇಂದಿನಿಂದ ಲೋಕಾಯುಕ್ತ ಪೊಲೀಸ್‌ರಿಂದ ಅಹವಾಲು ಸ್ವೀಕಾರ
ಬಳ್ಳಾರಿ: ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮೇ 28ರಿಂದ 31ರವರೆಗೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಮೇ 28ರಂದು ಹೂವಿನಹಡಗಲಿ, 29ರಂದು ಬಳ್ಳಾರಿ ಹಾಗೂ ಹಗರಿಬೊಮ್ಮನಹಳ್ಳಿ, 30ರಂದು ಸಿರುಗುಪ್ಪ ಹಾಗೂ ಕೂಡ್ಲಿಗಿ, 31ರಂದು ಸಂಡೂರು ಹಾಗೂ ಹೊಸಪೇಟೆ ತಾಲೂಕಿನ ಸಾರ್ವಜನಿಕರ ಕುಂದು ಕೊರತೆಗಳನ್ನು ಇತ್ಯರ್ಥ ಪಡಿಸಲಿದ್ದಾರೆ. ಆಯಾ ದಿನಾಂಕಗಳಂದು ಸಂಬಂಧಿಸಿದ ತಾಲೂಕಿನ ಪ್ರವಾಸಿ ಮಂದಿರಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ವಿಚಾರಿಸಲಿದ್ದು, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಿದ್ದಾರೆ. ಬಳ್ಳಾರಿಯ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜೆ. ರಮೇಶ್ ಅವರ ನೇತೃತ್ವದಲ್ಲಿ ಸಿರುಗುಪ್ಪ, ಸಂಡೂರು, ಬಳ್ಳಾರಿ ತಾಲೂಕಿನ ಕುಂದು ಕೊರತೆಗಳು ಹಾಗೂ ಹೊಸಪೇಟೆಯ ಲೋಕಾಯುಕ್ತ ಉಪಾಧೀಕ್ಷಕ ಎಂ. ಪಾಷಾ ಅವರ ನೇತೃತ್ವದಲ್ಲಿ ಹೊಸಪೇಟೆ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ತಾಲೂಕಿನ ಕುಂದು ಕೊರತೆಗಳನ್ನು ಸ್ವೀಕರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಜಿ.ಎಸ್. ಹೆಬ್ಬಾಳ್ ತಿಳಿಸಿದ್ದಾರೆ.