ಕಲುಷಿತ ನೀರು: ಜನತೆ ಅಸ್ವಸ್ಥ
ಹೊಸಪೇಟೆ: ನಗರದಲ್ಲಿ ಕಳೆದ ಕೆಲ ದಿನಗಳಿಂದ ಕಲುಷಿತ ನೀರು ಸೇವನೆಯಿಂದಾಗಿ ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಇದರ ಪರಿಣಾಮ ಜಲಾಶಯದಲ್ಲಿನ ನೀರು ಕಲುಷಿತಗೊಂಡಿದೆ. ಇದೇ ನೀರನ್ನು ಕುಡಿಯಲು ಬಿಡುತ್ತಿರುವುದರಿಂದ ಜಲಾಶಯದ ನೀರು ಹೊಂಡು ಹೊಂಡಾಗಿ ಬರುತ್ತಿದೆ. ಕೆಲ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್ಲೈನ್ನಲ್ಲಿ ಚರಂಡಿ ನೀರು ಸೇರುತ್ತಿದೆ. ಇದರಿಂದ ಇಲ್ಲಿನ ಜನತೆ ಕಲುಷಿತ ನೀರನ್ನೇ ಕುಡಿಯುವುದರಿಂದ ಈ ಅವಾಂತರಗಳು ನಡೆಯುತ್ತಿವೆ. ಒಂದು ವಾರದಿಂದ ವಾಂತಿ, ಭೇದಿಯಿಂದಾಗಿ ಸ್ಥಳೀಯ ನೂರು ಹಾಸಿಗೆ ಆಸ್ಪತ್ರೆಯಲ್ಲಿ 20ಕ್ಕೂ ಅಧಿಕ ಜನರು ದಾಖಲಾಗಿದ್ದಾರೆ. ಭಾನುವಾರ ಮತ್ತು ಸೋಮವಾರ ನಗರದ ಎಸ್.ಆರ್. ನಗರ, ಚಿತ್ತವಾಡ್ಗಿ, ಕೊಂಡನಾಯಕನಹಳ್ಳಿ ಸೇರಿದಂತೆ ತಾಲೂಕಿನ ನಾಗೇನಹಳ್ಳಿ, ಮಲಪನಗುಡಿ, ಮರಿಯಮ್ಮನಹಳ್ಳಿಯ ಕೆಲ ಪ್ರದೇಶದ ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಸರಬರಾಜು ಆಗುತ್ತಿರುವುದರಿಂದ ಈ ಪ್ರಕರಣಗಳು ಕಾಣಿಸಿಕೊಂಡಿವೆ. ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಶಿಕ್ಷಕರಿಗೆ ಸನ್ಮಾನ
ಬಳ್ಳಾರಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಗೋಕಾಕ್ ತಾಲೂಕಿನ ಮೂಡಲಗಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಚೈತನ್ಯ ಆಶ್ರಮ ಮತ್ತು ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಜಂಟಿಯಾಗಿ ಗೋಕಾಕ್ ತಾಲೂಕಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ-2013 ಹಾಗೂ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮಠಾಧೀಶ ಸದಾಶಿವ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಸಂಸ್ಥಾಪಕ ಎಸ್.ಎಸ್. ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಬಳ್ಳಾರಿ ಜಿಲ್ಲೆಯ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳ್ಳಾರಿ ತಾಲೂಕಿನ ಪಿ.ಡಿ. ಹಳ್ಳಿ ಸರ್ಕಾರಿ ಶಾಲೆ ಶಿಕ್ಷಕ ಈರೇಶಿ, ಬಿಸಿಲಹಳ್ಳಿ ಶಿಕ್ಷಕ ವಾಸುದೇವ ಹಾಗೂ ನಗರದ ಜಿ.ಟಿ. ಬೀದಿ ಸರ್ಕಾರಿ ಶಾಲೆಯ ಶಿಕ್ಷಕಿ ಈರಮ್ಮ, ಪಾರ್ವತಿ ನಗರದ ಸರ್ಕಾರಿ ಶಾಲೆ ಶಿಕ್ಷಕಿ ಸುನಂದಮ್ಮ ಅವರಿಗೆ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ನಂತರ ಗುರು ವಿಭೂಷಣ ಪ್ರಶಸ್ತಿಯನ್ನು ಜಿಲ್ಲೆಯ ಪಟ್ಟಣಸೆರಗು ಸರ್ಕಾರಿ ಶಾಲೆ ಶಿಕ್ಷಕ ಜಿ. ಶಿವಶಂಕರ, ಕುರುಗೋಡು ಶಿಕ್ಷಕ ಭೂಮೇಶ, ಇಬ್ರಾಂಹಿಂಪುರ ಗ್ರಾಮದ ಶಿಕ್ಷಕಿ ರೂಪಶ್ರೀ ಮತ್ತು ಶಿಕ್ಷಕ ನಾಗರಾಜ ಅವರಿಗೆ ನೀಡಿ ಗೌರವಿಸಲಾಯಿತು. ಗುರು ಶ್ರೇಷ್ಠ ಪ್ರಶಸ್ತಿಯನ್ನು ನಗರದ ಬಸಮ್ಮ ಶಾಲೆ ಶಿಕ್ಷಕ ವಿರೂಪಾಕ್ಷಯ್ಯ, ಪಿ.ಡಿ. ಹಳ್ಳಿ ಸರ್ಕಾರಿ ಶಾಲೆ ಶಿಕ್ಷಕ ಪಿ. ಮರಿಸ್ವಾಮಿ ಹಾಗೂ ಶಿಕ್ಷಕ ಕೆ. ನಾಗರಾಜ ಅವರಿಗೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಜಿಲ್ಲೆಯಲ್ಲಿ ಹಲವೆಡೆ ಮಳೆ
ಬಳ್ಳಾರಿ: ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಬಳ್ಳಾರಿ ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆಯಾಗುವ ಮೂಲಕ ಬಿಸಿಲ ಬಳ್ಳಾರಿಯನ್ನು ತಂಪಾಗಿಸುವ ಜೊತೆಗೆ ರೈತರಲ್ಲಿ ಮುಂಗಾರು ಮಳೆಯ ಆಶಾಭಾವವನ್ನು ಹುಟ್ಟುಹಾಕಿದೆ. ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿದೆ. ಹೊಸಪೇಟೆ ಹಾಗೂ ಸಿರುಗುಪ್ಪ ತಾಲೂಕಿನಲ್ಲಿ ಸೋಮವಾರ ಬೆಳಗಿನ ಜಾವ ಕೆಲವು ಕಡೆಗೆ ಮಳೆಯಾಗಿದೆ. ಬಳ್ಳಾರಿ ನಗರ ಸೇರಿದಂತೆ ಬಳ್ಳಾರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಸಂಡೂರು ತಾಲೂಕಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಸಿರುಗುಪ್ಪ ಹಾಗೂ ಹೊಸಪೇಟೆಯಲ್ಲಿ ಸೋಮವಾರ ಬೆಳಗಿನ ಜಾವ ತುಂತುರು ಮಳೆಯಾಗಿದೆ. ಭಾನುವಾರ ರಾತ್ರಿಯಿಂದಲೇ ಗುಡುಗು, ಮಿಂಚಿನ ಆರ್ಭಟ ಹೆಚ್ಚಾಗಿತ್ತು. ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಭಾನುವಾರ ರಾತ್ರಿಯಿಂದಲೇ ಗುಡುಗು, ಮಿಂಚು ಸಹಿತ ಸಾಧಾರಣೆ ಮಳೆಯಾಗಿದೆ. ಜಿಲ್ಲೆಯ ಪೈಕಿ ಹಡಗಲಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಮೈಲಾರ ಸೇರಿದಂತೆ ವಿವಿಧ ಕಡೆಗಳಲ್ಲಿ 6 ಗಂಟೆಗಳ ಕಾಲ ಉತ್ತಮ ಮಳೆಯಾಗಿದೆ. ಬಳ್ಳಾರಿ ತಾಲೂಕಿನಲ್ಲಿ 33 ಮಿ.ಮೀ. ಹೂವಿನಹಡಗಲಿಯಲ್ಲಿ 59.4 ಮಿ. ಮೀ. ಹಗರಿಬೊಮ್ಮನಹಳ್ಳಿಯಲ್ಲಿ 2.3 ಮಿ.ಮೀ., ಕೂಡ್ಲಿಗಿಯಲ್ಲಿ 9.2 ಮಿ.ಮೀ., ಸಂಡೂರು ತಾಲೂಕಿನ 7.5 ಮಿ.ಮೀ. ಮಳೆಯಾಗಿದೆ. ಒಟ್ಟಾರೆ 111.4 ಮಿ.ಮೀ. ಮಳೆಯಾದ ವರದಿಯಾಗಿದೆ.