ಕೆಡಿಪಿ ಸಭೆ ರದ್ದು
ಹೂವಿನಹಡಗಲಿ: ಇಲ್ಲಿನ ತಾಲೂಕು ಪಂಚಾಯಿತಿ ಮಲ್ಲಿಗೆ ಸಭಾಂಗಣದಲ್ಲಿ ಸೋಮವಾರ ಕಾರ್ಮಿಕ ಖಾತೆ ರಾಜ್ಯ ಸಚಿವ ಪಿ.ಟಿ.ಪರಮೇಶ್ವರನಾಯ್ಕ್ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ಕಾರಣಾಂತರಗಳಿಂದ ರದ್ದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುಡಿಯುವ ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಬೆಂಗಳೂರಿನಲ್ಲಿ ಜಿಪಂ ಅಧಿಕಾರಿಗಳ ಸಭೆ ಕರೆದಿದ್ದು, ಈ ಸಂದರ್ಭದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹಾಜರಿರಬೇಕೆಂದು ಪ್ರಕಟಣೆ ಹೊರಡಿಸಿದ ಹಿನ್ನೆಲೆಯಲ್ಲಿ ಸಚಿವ ಪರಮೇಶ್ವರನಾಯ್ಕ್ ಸೋಮವಾರ ಬೆಂಗಳೂರಿಗೆ ಹೋಗಿದ್ದಾರೆಂದು ತಿಳಿದು ಬಂದಿದೆ.
ಕೆಡಿಪಿ ಸಭೆಯಲ್ಲಿ ಕ್ಷೇತ್ರದ ನೂರಾರು ಸಮಸ್ಯೆಗಳು ಚರ್ಚೆಯಾಗಬೇಕಿತ್ತು. ಇದಕ್ಕೂ ಮೊದಲು ಆಯಾ ಇಲಾಖೆಯ ಅಧಿಕಾರಿಗಳು ಸಚಿವರ ಸಭೆ ಇದೆ ಎಂದು ತಿಳಿದು ಶನಿವಾರ, ಭಾನುವಾರ ತಾಲೂಕು ಕೇಂದ್ರದಲ್ಲೇ ಉಳಿದು ಇಲಾಖೆಯ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಇತ್ತ ಸಚಿವರ ಸಭೆ ರದ್ದಾಗಿದ್ದನ್ನು ತಿಳಿಯುತ್ತಲೇ ಸೋಮವಾರ ಇಲಾಖೆಯಲ್ಲಿ ಉಳಿಯದೇ ಊರುಗಳ ಕಡೆಗೆ ತೆರಳಿದ್ದಾರೆ.
ನೇಣು ಬಿಗಿದು ಯುವಕ ಆತ್ಮಹತ್ಯೆ
ಕೊಟ್ಟೂರು: ಕುಡಿತಕ್ಕೆ ದಾಸನಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಎಂ. ಗುರುಸಿದ್ದಪ್ಪ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಕುಡಿತ ಚಟ ಹೊಂದಿದ್ದ ಈ ಯುವಕ ಪಟ್ಟಣದ ರಾಜೀವ್ ನಗರದಲ್ಲಿ ತನ್ನ ಮನೆಯಲ್ಲಿ ಯಾರೂ ಇಲ್ಲ ಸಂದರ್ಭದಲ್ಲಿ ಮನೆಯ ಮೇಲ್ಭಾಗಕ್ಕೆ ಹಗ್ಗ ಬಿಗಿದುಕೊಂಡು ನೇಣು ಬಿಗಿದುಕೊಂಡಿದ್ದಾನೆ ಎಂದು ಗೊತ್ತಾಗಿದೆ. ಈ ಕುರಿತು ಆತನ ತಾಯಿ ಶಾಂತಮ್ಮ ಇಲ್ಲಿನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪಟ್ಟಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಗುರುರಾಜ್ ಎನ್. ಮೈಲಾರ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡರು.