ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮುಖ್ಯಾಧಿಕಾರಿ ಹುಡುಕಿ ಕೊಡಿ

Lingaraj Badiger
Updated On : 28 May 2013, 11:35 am

ಹೂವಿನಹಡಗಲಿ: ಹೂವಿನಹಡಗಲಿ ಪುರಸಭೆ ಹಣೆಬರಹ ಯಾಕೋ ನೆಟ್ಟಗೆ ಇಲ್ಲ ಅಂತಾ ಕಾಣುತ್ತೆ. ದೇವಸ್ಥಾನದಲ್ಲಿ ದೇವರು ಇಲ್ಲದೇ ಹೋದರೆ ಅದಕ್ಕೆ ಮಾನ್ಯತೆ ಹೇಗೆ ಇಲ್ಲವೋ, ಹಾಗೆ ಇಲ್ಲಿನ ಪುರಸಭೆಗೂ ಕಳೆದ 17 ದಿನಗಳಿಂದ ಮುಖ್ಯಾಧಿಕಾರಿಯೇ ಇಲ್ಲ. ಅವರು ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿ ಕೊಡಿವಿರಾ? ಹೀಗೆಂದು ಹೂವಿನಹಡಗಲಿ ಪಟ್ಟಣದ ಜನತೆ ಕೇಳಿಕೊಳ್ಳುತ್ತಿದ್ದಾರೆ.
ಹೌದು, ಮೇ 10ರಿಂದ ಈವರೆಗೂ ಪುರಸಭೆ ಮುಖ್ಯಾಧಿಕಾರಿ ಶ್ರೀಧರ ಅಂಗಡಿ ಅನಧಿಕೃತ ಗೈರಾಗಿದ್ದು, ತಮ್ಮ ಅಧಿಕಾರವನ್ನು ಬೇರೆಯವರಿಗೂ ವಹಿಸಿಕೊಟ್ಟು ಹೋಗಿಲ್ಲ. ಇತ್ತ ಹೂವಿನಹಡಗಲಿ ಜನತೆ ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪದ ವ್ಯವಸ್ಥೆಯಂತೂ ತೀರಾ ಹದಗೆಟ್ಟು ಹೋಗಿದ್ದು, ಮಲ್ಲಿಗೆ ವಾಸನೆ ಬೀರುವ ಹೂವಿನಹಡಗಲಿ ಈಗ ದುರ್ನಾತ ವಾಸನೆ ಬೀರುವಂತಾಗಿದೆ. ಪುರಸಭೆ ಕಚೇರಿಯಿಂದ ಅನತಿ ದೂರದಲ್ಲಿರುವ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಚರಂಡಿ ತುಂಬಿ ಗಬ್ಬು ವಾಸನೆ ಬೀರುತ್ತಿದೆ. ಇದನ್ನು ಕಂಡ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಪುರಸಭೆ ಸಿಬ್ಬಂದಿಯನ್ನು ಮಾತನಾಡಿಸಿದರೆ ನಮ್ಮ ಕೈಲಾದಷ್ಟು ಸ್ವಚ್ಛತೆ ಮಾಡುತ್ತಿದ್ದೇವೆ. ಸ್ವಚ್ಛತೆ ಕಾಮಗಾರಿ ಕೈಗೊಳ್ಳಲು ಹಣ ಅಗತ್ಯವಿದೆ. ಆದರೆ ಮುಖ್ಯಾಧಿಕಾರಿಗಳು ಇಲ್ಲದ ಕಾರಣ ಸ್ವಲ್ಪ ಮಟ್ಟಿನ ತೊಂದರೆ ಉಂಟಾಗಿದೆ ಎನ್ನುತ್ತಾರೆ.
ಅಲೆದಾಟ ತಪ್ಪಿಲ್ಲ: ಸರ್ಕಾರ ಸಕಾಲ ಯೋಜನೆಯಡಿ ಫಲಾನುಭವಿಗಳಿಗೆ ಸಕಾಲಕ್ಕೆ ದಾಖಲೆ ಮತ್ತು ಖಾತೆ ನಕಲು ಸೇರಿದಂತೆ ಇತರೆ ದಾಖಲೆಗಳನ್ನು ನೀಡಬೇಕೆಂದು ಹೇಳಿಕೊಂಡಿದೆ. ಆದರೆ ಇತ್ತ ಮುಖ್ಯಾಧಿಕಾರಿಗಳೇ ಕಾಣೆಯಾಗಿರುವುದರಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನಿತ್ಯ ಪುರಸಭೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಸಾರ್ವಜನಿಕರ ಕೆಲಸಕ್ಕೆ ಈ ರೀತಿ ಅಡ್ಡಿಯಾಗುತ್ತಿದ್ದರೆ ಯಾರು ಕ್ರಮ ತೆಗೆದುಕೊಳ್ಳಬೇಕೆಂಬುದು ಜನತೆ ಪ್ರಶ್ನಿಸುತ್ತಾರೆ.
ಡಿಸಿ ಮೌನ: ಅತ್ತ ದಕ್ಷ, ಪ್ರಾಮಾಣಿಕ ಅಧಿಕಾರಿಯೆಂದು ಹೆಸರುಗಳಿಸಿರುವ ಜಿಲ್ಲಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್ ಈವರೆಗೂ ಪುರಸಭೆಯ ಸಮಸ್ಯೆಯತ್ತ ಗಮನ ಹರಿಸದೇ ಯಾವೊಬ್ಬ ಅಧಿಕಾರಿಯನ್ನು ನಿಯೋಜಿಸುವ ಗೋಜಿಗೆ ಹೋಗಿಲ್ಲ.
   ಈಗಾಗಲೇ ಮುಖ್ಯಾಧಿಕಾರಿ ಶ್ರೀಧರ ಅಂಗಡಿ ಅನಧಿಕೃತ ಗೈರು ಸೇರಿದಂತೆ ಎಲ್ಲ ರೀತಿಯ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದರೂ ಈವರೆಗೂ ಮುಖ್ಯಾಧಿಕಾರಿ ಹುದ್ದೆಗೆ ಬೇರೊಬ್ಬ ಅಧಿಕಾರಿಯನ್ನು ನಿಯೋಜಿಸದಿರುವುದರಿಂದ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದೆ.
ನೀರಿಗೆ ಪರದಾಟ: ಪುರಸಭೆಯು ಕನಿಷ್ಠ ಕುಡಿಯುವ ನೀರನ್ನೇ ಸಮರ್ಪಕವಾಗಿ ನೀಡುತ್ತಿಲ್ಲ. 23 ವಾರ್ಡ್‌ಗಳ ಜನತೆ ನಿತ್ಯ ನೀರಿಗಾಗಿ ಅಲೆದಾಡುತ್ತಿದ್ದಾರೆ. ಈ ಹಿಂದೆ ತುಂಗಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿತ್ತು, ಆಗ ನದಿಯಲ್ಲಿ ಕೊಳವೆಬಾವಿ (ಮುದ್ದಿ ಬೋರ್) ಕೊರೆದು ನೀರು ಸಂಗ್ರಹಿಸಿ 15-20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದರು. ಆದರೆ ತುಂಗಭದ್ರಾ  ನದಿ ನೀರು ಬಂದರೂ ಸಮರ್ಪಕವಾಗಿ ನೀರು ಪೂರೈಕೆ ಮಾಡುವಲ್ಲಿ ಕೆಲ ತಾಂತ್ರಿಕ ತೊಂದರೆಗಳಿಂದ ಇಂದಿಗೂ ನೀರು ಸಿಗುತ್ತಲೇ ಇಲ್ಲ.
ಕುಡಿಯುವ ನೀರಿನ ಜಾಕ್‌ವೆಲ್ ಬಳಿ ಮರಳಿನ ಚೀಲ ಹಚ್ಚಿದ್ದಾರೆ, ಆದರೆ ನದಿ ಹರಿಯುವಾಗ ಮರಳು ಬಂದು ಹೂಳು ತುಂಬಿಕೊಂಡಿದೆ. ಇದರಿಂದ ನೀರು ಸಂಗ್ರಹವಾಗದೇ ಮುಂದಕ್ಕೆ ಹರಿಯುವುದರಿಂದ ಜಾಕ್‌ವೆಲ್‌ಗೆ ನೀರೇ ಇಲ್ಲದಂತಾಗುತ್ತದೆ. ಇದರಿಂದ ನೀರಿನ ತೊಂದರೆಯಾಗುತ್ತಿದೆ ಎಂಬ ದೂರು ಜನತೆಯಿಂದ ಕೇಳಿ ಬರುತ್ತಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಬೇರೊಬ್ಬ ಅಧಿಕಾರಿಯನ್ನು ಮುಖ್ಯಾಧಿಕಾರಿ ಹುದ್ದೆಗೆ ನಿಯೋಜಿಸಿ, ಪುರಸಭೆಯ ಕೆಲಸ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುವಂತೆ ಮಾಡುವರೇ ಎಂಬುದನ್ನು ಕಾಯ್ದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement