ಎಲ್ರೂ ಮಾಡುವುದು ಡೊನೇಶನ್ಗಾಗಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 29
ಏಪ್ರಿಲ್, ಮೇ ಬಂದಾಕ್ಷಣ ಖಾಸಗಿ ಶಾಲಾ-ಕಾಲೇಜುಗಳು ವಿಭಿನ್ನ ಕಸರತ್ತುಗಳ ಮೂಲಕ ಪೋಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿ ತೊಡಗುತ್ತವೆ. ಆ ಮೂಲಕ ತಮ್ಮ ಶಾಲಾ-ಕಾಲೇಜುಗಳ ದಾಖಲಾತಿ ಹೆಚ್ಚಿಸಿಕೊಳ್ಳಲು ಮುಂದಾಗುತ್ತವೆ.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ ಬಳ್ಳಾರಿಯಲ್ಲಿ ಖಾಸಗಿ ಶಾಲಾ-ಕಾಲೇಜುಗಳ ಮಧ್ಯೆ ದಾಖಲಾತಿಗಾಗಿ ಸ್ಪರ್ಧೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಏಪ್ರಿಲ್, ಮೇನಲ್ಲಿ ಬಳ್ಳಾರಿಗೆ ಬಂದರೆ ರಾಜಕೀಯ ಪಕ್ಷಗಳ ಬ್ಯಾನರ್ಗಳಿಗಿಂತ ಖಾಸಗಿ ಶಾಲಾ-ಕಾಲೇಜುಗಳ ಬ್ಯಾನರ್ಗಳ ಭರಾಟೆಯೇ ಹೆಚ್ಚಾಗಿರುತ್ತದೆ. ಬಳ್ಳಾರಿಯ ಬಹುತೇಕ ವೃತ್ತ ಹಾಗೂ ಜನಸಂದಣಿ ಇರುವ ರಸ್ತೆಯ ಇಕ್ಕೆಲಗಳಲ್ಲಿ ರಾಜಕೀಯ ಪಕ್ಷಗಳ ಬ್ಯಾನರ್ಗಳು ರಾರಾಜಿಸುತ್ತಿದ್ದವು, ಆದರೆ ಇದೀಗ ಖಾಸಗಿ ಶಾಲಾ-ಕಾಲೇಜುಗಳ ಬ್ಯಾನರ್ಗಳು ಎದ್ದುಕಾಣುತ್ತಿವೆ. ಸಿಇಟಿ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪೋಟೋ ಹಾಗೂ ಅಂಕಗಳೊಂದಿಗೆ ಆಯಾ ವಿದ್ಯಾಸಂಸ್ಥೆಗಳು ಹೆಸರು ಹಾಕಿಸುವ ಮೂಲಕ ಪೋಷಕರನ್ನು ತಮ್ಮತ್ತ ಸೆಳೆಯುವ ಯತ್ನಕ್ಕೆ ಬಹುತೇಕ ಖಾಸಗಿ-ಶಾಲಾ ಕಾಲೇಜುಗಳ ಮಾಡುತ್ತಿವೆ. ಆ ಮೂಲಕ ತಮ್ಮ ವ್ಯಾಪಾರ ಮನೋಭಾವವನ್ನು ಪ್ರದರ್ಶಿಸುತ್ತಿವೆ.
ಐಷಾರಾಮಿ ಕ್ಲಾಸ್ರೂಂಗಳು ಇಲ್ಲಿ ಲಭ್ಯ: ಮಕ್ಕಳು ಕಷ್ಟದಲ್ಲೇ ಬೆಳೆಯಬೇಕು. ಅಂದಾಗ ಮಾತ್ರ ಅವರಿಗೆ ಬದುಕು, ಶಿಕ್ಷಣದ ಮಹತ್ವ ತಿಳಿಯುತ್ತದೆ ಎಂದು ನಮ್ಮ ಪೂರ್ವಿಕರು ಹೇಳುತ್ತಾ ಕಟ್ಟುನಿಟ್ಟಿನ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಆದರೆ ಇಂದು ಈ ಮನೋಭಾವ ಬದಲಾಗಿದೆ. ಲಕ್ಷಾಂತರ ರು. ಖರ್ಚು ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪೋಷಕರು ಆಸಕ್ತಿ ತೋರುವುದರಿಂದ ಪೋಷಕರ ಮನಸ್ಥಿತಿ ಅರಿತ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ದಂಧೆಯನ್ನು ಸುಲಭವಾಗಿ ಈಡೇರಿಸಿಕೊಳ್ಳಲು ಮುಂದಾಗಿವೆ. ಇನ್ನು ಕೆಲ ಶಾಲೆಗಳಲ್ಲಂತೂ ಕ್ಲಾಸ್ರೂಂಗಳಲ್ಲಿ ಎಸಿ ವ್ಯವಸ್ಥೆ ಮಾಡಿದ್ದಾರಂತೆ. ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಮಕ್ಕಳು ಪಾಠ ಕೇಳುವ ಬದಲು ನಿದ್ರೆಗೆ ಜಾರಿದರೂ ಆಶ್ಚರ್ಯವಿಲ್ಲ. ಎಸಿ ವ್ಯವಸ್ಥೆ ಇರುವುದನ್ನು ಪ್ರಚಾರ ಮಾಡಿ ಪೋಷಕರು ಹಾಗೂ ಮಕ್ಕಳನ್ನು ತಮ್ಮತ್ತ ಸೆಳೆಯಲು ಇದು ಒಂದು ಭಾಗವಾಗಿದೆ.
ನಾಯಿ ಕೊಡೆಗಳಾಗುತ್ತಿರುವ ಶಾಲೆಗಳು: ಬಳ್ಳಾರಿ ನಗರದಲ್ಲಿ ಖಾಸಗಿ ಶಾಲೆಗಳಿಗೆ ಲೆಕ್ಕವಿಲ್ಲ, ನಾಯಿ ಕೊಡೆಗಳಂತೆ ಶಾಲೆಗಳು ತಲೆ ಎತ್ತುತ್ತಿವೆ. ಇದು ಶಾಲೆಗಳ ಮಧ್ಯೆ ಸ್ಪರ್ಧೆ ಏರ್ಪಡುವಂತಾಗಿದೆ. ಇದಕ್ಕಾಗಿಯೇ ಖಾಸಗಿ ಸಂಸ್ಥೆಗಳವರು ವಿಭಿನ್ನ ಕಸರತ್ತು ಮಾಡುತ್ತಾರೆ. ಬ್ಯಾನರ್ಗಳ ಮೂಲಕ ನಮ್ಮ ಶಾಲೆಯಲ್ಲಿ ಓದಿದರೆ ಇಷ್ಟರ ಮಟ್ಟಿಗೆ ರ್ಯಾಂಕ್ ಪಡೆಯಲು ಸಾಧ್ಯ ಎಂಬುದನ್ನು ಜನಸಾಮಾನ್ಯರಿಗೆ ಅರ್ಥೈಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ವಂತಿಗೆಯಲ್ಲಿ ಮಾತ್ರ ಬಿಲ್ಕುಲ್ ಕಡಿಮೆ ಇಲ್ಲ. ಅಧಿಕೃತ ರಸೀದಿ ನೀಡದೆ ವಂತಿಗೆ ಪಡೆಯುವುದರಿಂದ ಯಾರೊಬ್ಬರಿಗೂ ಅವರ ದಂಧೆಯನ್ನು ಪ್ರಶ್ನಿಸಲು ಸಾಧ್ಯವೇ ಆಗುವುದಿಲ್ಲ. ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಪೋಷಕರು ಆ ಬಗ್ಗೆ ಚಕಾರವೆತ್ತುತ್ತಿಲ್ಲ. ಪೋಷಕರ ಈ ಮನೋಭಾವಗಳು ಖಾಸಗಿ ಶಾಲೆಗಳ ವಂತಿಗೆಯ ದಂಧೆಗೆ ಹೇಳಿ ಮಾಡಿಸಿದಂತಿವೆ.
ಪ್ರತಿಭೆಯಲ್ಲಿ ಸರ್ಕಾರಿ ಶಿಕ್ಷಕರೇ ಮೇಲುಗೈ: ಸರ್ಕಾರಿ ಶಾಲೆಗಳಿಗೆ ಶಿಕ್ಷಕರಾಗಬೇಕಾದರೆ ಸಾಕಷ್ಟು ಬುದ್ಧಿವಂತಿಕೆ, ಪ್ರತಿಭೆ, ಬೋಧನಾ ಕೌಶಲ್ಯ ಸೇರಿದಂತೆ ಇತರ ಪ್ರತಿಭೆಗಳು ಇದ್ದರೆ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕವಾಗಲು ಸಾಧ್ಯ. ಆದರೆ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಬೇಕಾದರೆ ಅಂತಹ ಪ್ರತಿಭೆ ಬೇಕಾಗಿಲ್ಲ, ಕನಿಷ್ಠ ಅರ್ಹತೆ ಇದ್ದು, ನಾಲ್ಕು ಅಕ್ಷರ, ಇಂಗ್ಲೀಷ್ ಭಾಷೆ ಮಾತನಾಡಲು ಬಂದರೆ ಅದುವೇ ಅವರಿಗೆ ಅರ್ಹತೆ ಎನ್ನುವ ರೀತಿಯಲ್ಲಿ ಇರುತ್ತದೆ.
ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಮೇಲೆ ಕಟ್ಟುನಿಟ್ಟಿನ ಹಿಡಿತ, ಸಮಯ ಪಾಲನೆ, ಹೆಜ್ಜೆ ಹೆಜ್ಜೆಗೂ ಶಾಲಾ ಆಡಳಿತ ಮಂಡಳಿಯ ನಿಗಾ, ಪಾಠದ ವೈಖರಿ ಸೇರಿದಂತೆ ಇತರ ವಿಷಯಗಳಲ್ಲಿ ಹಿಡಿತ ಇರುತ್ತದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಇಂತಹ ಕಟ್ಟುನಿಟ್ಟಿನ ವ್ಯವಸ್ಥೆ ಕಷ್ಟಸಾಧ್ಯ. ಇಂತಹ ಕಾರಣಗಳಿಂದಲೇ ಖಾಸಗಿ ಶಾಲೆಗಳಲ್ಲಿ ಚೆನ್ನಾಗಿ ಕಲಿಸುತ್ತಾರೆ ಎನ್ನುವ ಮನೋಭಾವನೆ ಪೋಷಕರದ್ದಾಗಿದೆ.
ಪೋಷಕರಿಗೆ ಪ್ರತಿಷ್ಠೆ ಪ್ರಶ್ನೆ: ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲಾ-ಕಾಲೇಜಿಗೆ ಸೇರಿಸುವುದು ಪೋಷಕರಿಗೆ ಪ್ರತಿಷ್ಠೆಯಾಗಿದೆ. ಯಾರಾದರೂ ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಿದ್ದೀರಿ ಎಂದು ಕೇಳಿದರೆ, ಸರ್ಕಾರಿ ಶಾಲೆಗೆ ಎಂದು ಹೇಳಿದರೆ, ತಮ್ಮ ಪ್ರತಿಷ್ಠೆ ಕಡಿಮೆಯಾಗುತ್ತದೆ ಎಂದೆಣಿಸುತ್ತಾರೆ. ತಮ್ಮ ಮಕ್ಕಳನ್ನು ಇಂತಹ ಶಾಲೆಗೆ ಸೇರಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇದೀಗ ಹಳ್ಳಿಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಆದರೆ ಓದುವ ಛಲ, ಪೋಷಕರ ಮನಸ್ಥಿತಿ, ಶಾಲಾ ವಾತಾವರಣ ಉತ್ತಮವಾಗಿದ್ದರೆ ಎಂತಹ ಶಾಲೆಯಲ್ಲಾದರೂ ಮಕ್ಕಳು ಉತ್ತಮ ರೀತಿಯಲ್ಲಿ ಕಲಿಯಬಹುದು ಎಂಬುದನ್ನು ಪೋಷಕರು ಮರೆತಂತಿದೆ.
-ಶಶಿಧರ ಮೇಟಿ