ವಿದ್ಯುತ್, ನೀರು ಕೊರತೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ
ಕೊಟ್ಟೂರು: ಹುಣಸಿಕಟ್ಟೆ ಗ್ರಾಮದಲ್ಲಿ ಕಳೆದ ವಾರ ಕಂಡು ಬಂದ ವಿದ್ಯುತ್ ಮತ್ತು ಕುಡಿಯುವ ನೀರಿನ ತೊಂದರೆಗೆ ಜನಪ್ರತಿನಿಧಿಗಳಾರು ಖಂಡಿತಾ ಕಾರಣರಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಉಜ್ಜಿನಿ ಜಿಪಂ ಸದಸ್ಯೆ ಶಾರದಾ ರಾಜೇಂದ್ರಪ್ರಸಾದ್ ಹೇಳಿದರು. ಅವರು ಬುಧವಾರ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿಗೆಂದೇ ರು. 5 ಲಕ್ಷ ವೆಚ್ಚದಲ್ಲಿ ಕೊಳವೆಬಾವಿ ಕೊರೆಯಿಸಿ ಪೈಪ್ಲೈನ್ ವ್ಯವಸ್ಥೆಯನ್ನು ತಾವು ಈ ಹಿಂದೆ ಮುತುವರ್ಜಿ ವಹಿಸಿ ಮಾಡಿಸಿರುವೆ. ಇದೂವರೆಗೆ ಆಡಳಿತ ನಡೆಸಿದ ಬಿಜೆಪಿಯವರ ಬೆಂಬಲದೊಂದಿಗೆ ಅಧಿಕಾರಿಗಳು ನಮ್ಮಗಳ ಮಾತು ಕೇಳದೆ ತಾವು ನಡೆದಿದ್ದೇ ಹಾದಿ ಎಂಬಂತೆ ವರ್ತಿಸಿದರು. ಇದೀಗ ನಮ್ಮದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಿದೆ. ಸಮಸ್ಯೆಗೆ ಕೂಡಲೇ ಸ್ಪಂದಿಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೇವೆ. ಯಾವುದೇ ಹಂತದಲ್ಲಿ ಹುಣಸಿಕಟ್ಟಿ ಗ್ರಾಮದಲ್ಲಿ ತೊಂದರೆಯಾಗದಂತೆ ಸದಾ ನಿಗಾವಹಿಸಿದ್ದೇನೆ ಎಂದರು. ಗ್ರಾಮದ ಸ್ವಚ್ಛತೆಯನ್ನು ಕೂಡಲೇ ಕಾಳಾಪುರ ಗ್ರಾಮ ಪಂಚಾಯಿತಿ ಪಿಡಿಓ ಕೈಗೆತ್ತಿಕೊಳ್ಳಬೇಕು. ಕುಡಿಯುವ ನೀರು ಪೂರೈಕೆಗೆ ಟ್ರಾನ್ಸ್ಫಾರ್ಮರ್ ದುರಸ್ತಿಗೊಳಿಸಲು ಮುಂದಾಗಬೇಕೆಂದು ತಾವು ಸಲಹೆ ನೀಡಿರುವುದಾಗಿ ತಿಳಿಸಲಾಗಿದೆ ಎಂದರು.
ಅಪಘಾತ: ಮಂಗಳಮುಖಿ ಸಾವು
ಬಳ್ಳಾರಿ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಂಗಳಮುಖಿ ಸಾವನ್ನಪ್ಪಿರುವ ಘಟನೆ ನಗರದ ಹೊಸಪೇಟೆ ರಸ್ತೆಯ ಬೈಪಾಸ್ನಲ್ಲಿ ಮಂಗಳವಾರ ಸಂಜೆ ನಡೆದಿದೆ. ಸಾವನ್ನಪ್ಪಿರುವ ಮಂಗಳಮುಖಿಯನ್ನು ಕುಡಿತಿನಿಯ ಪರಶುರಾಮ (25) ಎಂದು ಗುರುತಿಸಲಾಗಿದೆ. ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
-