ಸರ್ಕಾರಿ ಆಸ್ಪತ್ರೇಲಿ ರೋಗಿಗೆ ಹಾಸಿಗೆ ಇಲ್ಲ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 29
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಹಿಳೆಯರಿಗೆ ಹಾಸಿಗೆ ಸೌಲಭ್ಯ ಇಲ್ಲದೇ ನೆಲದ ಮೇಲೆ ಮಲಗಿಕೊಂಡಿದ್ದು, ಸಾಲಭ್ಯ ವಂಚಿತರಾಗಿದ್ದಾರೆ.
ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳು ಸುತ್ತಿಕೊಂಡು ಅನೇಕ ಅವಾಂತರಗಳು ನಡೆದರೂ, ಬಡ ರೋಗಿಗಳ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಿದೆ. ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಕ್ಷರಶಃ ರೋಗಿಗಳಿಗೆ ಸೌಲಭ್ಯಗಳೇ ಮಾಯವಾಗಿವೆ. ಮಂಗಳವಾರ 31 ಮಹಿಳೆಯರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ಕೇವಲ 50 ಹಾಸಿಗೆ ಆಸ್ಪತ್ರೆಯಾಗಿದ್ದು, ಬಂದ ರೋಗಿಗಳು ಬೆಡ್ಗಳಿಗೆ ಪರದಾಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಕೊಂಡ ಮಹಿಳೆಯರಿಗೆ ಬೆಡ್ ಮೇಲೆ ಮಲಗುವ ಭಾಗ್ಯವೇ ಇಲ್ಲದಂತಾಗಿದ್ದು, ಆಸ್ಪತ್ರೆ ಆವರಣದಲ್ಲಿರುವ ನೆಲದ ಮೇಲೆಯೇ ಮಲಗಿಕೊಳ್ಳುವ ಪರಿಸ್ಥಿತಿ ಒದಗಿಬಂದಿದೆ.
ಹಾಸಿಗೆ ಇಲ್ಲ: ಈ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ಬಸವರಾಜ್ ಅವರನ್ನು ಸಂಪರ್ಕಿಸಿದಾಗ, ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆ ಮಾತ್ರ ಇವೆ. ಸಂತಾನ ಹರಣ ಚಿಕಿತ್ಸೆಗಾಗಿ ಬಂದ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದರಿಂದ ಹಾಸಿಗೆ ಇಲ್ಲದಂತಾಗಿ ನೆಲದ ಮೇಲೆ ಮಲಗಿಸಲಾಗಿದೆ ಎನ್ನುತ್ತಾರೆ.
ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಇತರೆ ತಜ್ಞರುಗಳ ಕೊರತೆ ಇದೆ. ತಿಂಗಳಿಗೊಮ್ಮೆ ಮಾತ್ರ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಸಮಯ ನೀಡಿದ್ದಾರೆ. ಹೀಗಾಗಿ ತಾಲೂಕಿನ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಸೌಲಭ್ಯಗಳ ಕೊರತೆ ಇದೆ. ತಿಂಗಳಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 5 ಮಂದಿಗೆ ಆಪರೇಷನ್ ಮಾಡಿದರೆ ಇಲ್ಲಿನ ಸೌಲಭ್ಯ ನೀಡಬಹುದು. ಆದರೆ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದರಿಂದ ಎಲ್ಲರಿಗೂ ಹಾಸಿಗೆ ನೀಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ.
ಈ ಕುರಿತು ಸಂತಾನ ಹರಣ ಶಸ್ತ್ರಚಿಕಿತ್ಸೆ ಒಳಗಾಗಿರುವ ಮಹಿಳೆಯರನ್ನು ಮಾತನಾಡಿಸಿದಾಗ, ನೀವು ಇನ್ನು ಸ್ವಲ್ಪ ಹೊತ್ತಿಗೆ ಮನೆ ಗೆ ಹೋಗುತ್ತೀರಿ. ಆದ್ದರಿಂದ ನಿಮಗೆ ಬೆಡ್ ಇಲ್ಲ, ನೆಲದ ಮೇಲೆಯೇ ಮಲಗಿಕೊಳ್ಳಿ ಎಂದು ಹೇಳಿದರು ಹಾಗಾಗಿ ಇಲ್ಲೇ ಮಲಗಿದ್ದೇವೆ ಎನ್ನುತ್ತಾರೆ.