ಡೊನೇಷನ್ ಹೆಚ್ಚಳ: ತರಾಟೆಗೆ
ಕೊಟ್ಟೂರು: ಇಲ್ಲಿನ ಗುರುದೇವ ಆಂಗ್ಲ ಮಾಧ್ಯಮ ಶಾಲೆಯವರು ಅತ್ಯಧಿಕ ಪ್ರಮಾಣದಲ್ಲಿ ಡೊನೇಷನ್ ನಿಗದಿಗೊಳಿಸಿರುವುದಕ್ಕೆ ಪಟ್ಟಣ ಪಂಚಾಯಿತಿ ಸದಸ್ಯ ಟಿ. ಮಂಜುನಾಥ ಆಕ್ರೋಶ ವ್ಯಕ್ತಪಡಿಸಿ, ಮುಖ್ಯೋಪಾಧ್ಯಾಯ, ಆಡಳಿತ ಮಂಡಳಿ ಸದಸ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದರು.
ಮಂಜುನಾಥ ತಮ್ಮ ಪುತ್ರಿಯನ್ನು 3ನೇ ತರಗತಿಗೆ ಪ್ರವೇಶ ಪಡೆಯಲು ತೆರಳಿದ್ದಾರೆ. 3ನೇ ತರಗತಿಗೆ ರು. 8,750 ನಿಗದಿಗೊಳಿಸಿರುವುದಕ್ಕೆ ಕಾರಣ ಕೊಡಿ ಎಂದು ಶಾಲಾ ಸಿಬ್ಬಂದಿಯನ್ನು ಕೇಳಿದ್ದಾರೆ. ಆಗ ಶುಲ್ಕ ನಿಗದಿಗೊಳಿಸಿರುವ ಬಗ್ಗೆ ಆಡಳಿತ ಮಂಡಳಿಯವರನ್ನೇ ಕೇಳಿ. ನಿಗದಿಗೊಳಿಸಿರುವ ಸಂಪೂರ್ಣ ಹಣ ನೀಡಿದರೆ ಮಾತ್ರ ಪ್ರವೇಶ, ಇಲ್ಲದಿದ್ದರೆ ಪ್ರವೇಶವಿಲ್ಲ ಎಂದು ಸಿಬ್ಬಂದಿ ಬೇಜವಾಬ್ದಾರಿತನದಿಂದ ಉತ್ತರಿಸಿದ್ದಾರೆ. ಇದರಿಂದ ಕುಪಿತಗೊಂಡ ಮಂಜುನಾಥ, ಆಡಳಿತ ಮಂಡಳಿ ಕಾರ್ಯದರ್ಶಿಯನ್ನು ಕರೆಯಿಸಿ ಎಂದು ಒತ್ತಾಯಿಸಿದರು. ಕಾರ್ಯದರ್ಶಿಯನ್ನು ಕರೆಯಲಾಗುವುದಿಲ್ಲ ಎಂದು ಸಿಬ್ಬಂದಿ ಪ್ರತ್ಯುತ್ತರಿಸಿದರು. ಇದರಿಂದ ಮತ್ತಷ್ಟು ಕೋಪಗೊಂಡ ಮಂಜುನಾಥ, ಸಿಬ್ಬಂದಿ ಬಳಿ ಇದ್ದ ಕೆಲ ವಸ್ತುಗಳನ್ನು ಎಸೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಆರೋಪ: ಶಾಲಾ ಪ್ರವೇಶದ ಅವಧಿಯನ್ನು ದಂಧೆಯನ್ನಾಗಿರಿಸಿಕೊಂಡಿರುವ ಗುರುದೇವ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಕರ್ಯಗಳನ್ನು ನೀಡದೇ ವಂಚಿಸುತ್ತಿದ್ದಾರೆ ಎಂದು ಮಂಜುನಾಥ ಆರೋಪಿಸಿದರು.