ಕಿಡಿಗೇಡಿಗಳನ್ನು ಪತ್ತೆ ಮಾಡಿ, ಸಾಮರಸ್ಯ ಕಾಪಾಡಿ
ಹೂವಿನಹಡಗಲಿ: ಪಟ್ಟಣದ ಜೋಡು ಮಸೀದಿ ಮರದ ಗಂಟಿನಲ್ಲಿ ಲಕ್ಷ್ಮೀ ಪ್ರತ್ಯಕ್ಷಳಾಗಿದ್ದಾಳೆಂಬ ಗಾಳಿ ಸುದ್ದಿಯು ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ದಾರಿಯಾಗದಂತೆ ಪೊಲೀಸ್ ಠಾಣೆಯಲ್ಲಿ ಗುರುವಾರ ಎರಡು ಕೋಮುಗಳ ಮುಖಂಡರ ಶಾಂತಿ ಸಭೆ ನಡೆಯಿತು.
ಗಾಳಿ ಸುದ್ದಿ ಹರಡಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ತಕ್ಕಶಿಕ್ಷೆ ನೀಡಬೇಕೆಂದು ಎರಡು ಕೋಮುಗಳ ಮುಖಂಡರು ಒತ್ತಾಯಿಸಿ ಘಟನೆ ಖಂಡಿಸಿದರು. ಈವರೆಗೂ ಪಟ್ಟಣದಲ್ಲಿ ಯಾವುದೆ ಪ್ರಚೋದನಕಾರಿ ಕೋಮುಗಲಭೆ ನಡೆದಿಲ್ಲ. ಎಲ್ಲ ಧರ್ಮ, ಜಾತಿ, ಜನಾಂಗದವರು ಸಾಮರಸ್ಯದಿಂದ ನಡೆದುಕೊಂಡಿದ್ದಾರೆಂದು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು.
ತಹಸೀಲ್ದಾರ್ ಎ.ಬಿ. ವಿಜಯಕುಮಾರ ಮಾತನಾಡಿ, ಯಾವುದೇ ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳದೆ ಸಾಮರಸ್ಯದಿಂದ ಸಾಗಬೇಕು. ಹೂವಿನಹಡಗಲಿ ತಾಲೂಕು ಜಿಲ್ಲೆಯಲ್ಲೇ ಶಾಂತಿಯುತ ವಾತಾವರಣಕ್ಕೆ ಹೆಸರು ಪಡೆದಿದೆ. ಇದಕ್ಕೆ ಮಸಿ ಬಳಿಯುವ ಕೆಲಸವನ್ನು ಯಾರೂ ಮಾಡಬಾರದು. ಎಲ್ಲರೂ ಶಾಂತಿ ಸಹಬಾಳ್ವೆಯಿಂದ ಬಾಳಿರಿ ಎಂದರು.
ಡಿವೈಎಸ್ಪಿ ಆರ್.ಎಸ್. ಪಾಟೀಲ್, ಎಲ್ಲ ಧರ್ಮ, ಜಾತಿ, ಜನಾಂಗದ ದಾರ್ಶನಿಕರ ಹಾದಿಯಲ್ಲಿ ಅವರ ಆದರ್ಶಗಳನ್ನು ಮೈಗೊಡಿಸಿಕೊಂಡು, ಮಾನವೀಯ ಮೌಲ್ಯಗಳಿಗೆ ಹೆಚ್ಚು ಬೆಲೆ ಕೊಟ್ಟಾಗ ಸಾಮರಸ್ಯ ಬದುಕು ಸಾಧ್ಯ. ಈ ಘಟನೆಗೆ ಕಾರಣರಾಗಿರುವ ವ್ಯಕ್ತಿಗಳ ಮಾಹಿತಿ ತಮ್ಮ ಗಮನಕ್ಕಿದ್ದು ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು.
ಸಿಪಿಐ ಪ್ರಕಾಶ ರಾಠೋಡ್ ಮಾತನಾಡಿ, ಗಾಳಿ ಸುದ್ದಿ ಹರಡಿಸಿರುವ ವ್ಯಕ್ತಿ ಎಷ್ಟೇ ಪ್ರಭಾವಿ ಇದ್ದರೂ ಕ್ರಮ ಕೈಗೊಳ್ಳಲಾಗುವುದು. ಶಾಂತಿ ಕಾಪಾಡಲು ಸಹಕರಿಸಿದ ಪಟ್ಟಣದ ಜನತೆಗೆ ಧನ್ಯವಾದ ಹೇಳಿದರು.
ಶಾಂತಿ ಸಭೆಯಲ್ಲಿ ಕೋಡಿಹಳ್ಳಿ ಮುದುಕಪ್ಪ, ಜಿ. ಬುಳ್ಳಪ್ಪ, ಹನುಮಂತಪ್ಪ, ಪುತ್ರೇಶ, ಚಾಂದ್‌ಸಾಬ್, ದಾವಲ್‌ಮಲಿ, ಹೇಮಗಿರಿಯಪ್ಪ, ಗೌಸ್‌ಸಾಹೇಬ್, ಗೋಣೆಪ್ಪ, ಮೋಹಿದ್ದೀನ್‌ಸಾಬ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.