ಕೊಂಡಯ್ಯ ನಿವೇಶನ ವಿವಾದ ಡಿಸಿಯಿಂದ ಮಾಹಿತಿ ಸಂಗ್ರಹ
ಬಳ್ಳಾರಿ: ಕಾಂಗ್ರೆಸ್ ಮುಖಂಡ ಕೊಂಡಯ್ಯ ಅವರು ಸರ್ಕಾರಿ ನಿವೇಶನ ಬಳಸಿಕೊಂಡಿರುವ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ನಾವು ಯಾರ ರಕ್ಷಣೆಗೂ ನಿಂತಿಲ್ಲ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಸ್ಪಷ್ಟಪಡಿಸಿದರು. ಶುಕ್ರವಾರ ಬಳ್ಳಾರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಿವೇಶನ ಬಳಸಿಕೊಂಡ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ಮಾಹಿತಿ ಪಡೆದ ನಂತರ ಸತ್ಯಾಂಶ ಏನೆಂಬುದು ತಿಳಿಯುತ್ತದೆ. ರಾಜ್ಯೋತ್ಸವ ಪ್ರಶಸ್ತಿಯಿಂದ ಬಳ್ಳಾರಿ ಜಿಲ್ಲೆಗೆ ಈ ಬಾರಿ ವಂಚನೆಯಾಗಿರುವ ಬಗ್ಗೆ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು. ಬಳ್ಳಾರಿಯಿಂದ ವನಮಾಲ ಕುಲಕರ್ಣಿ ಸೇರಿದಂತೆ ಮೂವರನ್ನು ಶಿಫಾರಸುಮಾಡಲಾಗಿತ್ತು. ಕ್ರೀಡಾ ವಿಭಾಗದಲ್ಲಿ ಬಳ್ಳಾರಿಯ ಮುರಳೀಧರ್ ಯಾರೆಂಬುದು ಗೊತ್ತಿಲ್ಲ, ಪ್ರಶಸ್ತಿ ಹಿಂಪಡೆದಿರುವುದು ನನಗೆ ಗೊತ್ತಿಲ್ಲ ಎಂದರು.